25 ವಾರಗಳ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಹೊಸದಿಲ್ಲಿ, ಜು. 3: ಇಪ್ಪತ್ತೈದು ವಾರಗಳ ಭ್ರೂಣದ ಹೃದಯ ಸಂಬಂಧಿ ಗಂಭೀರ ಕಾಯಿಲೆಗಳ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ಪಶ್ಚಿಮ ಬಂಗಾಳದ ಮಹಿಳೆಯೋರ್ವಳು ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.
ಗರ್ಭ ಮುಂದುವರಿಸಿದರೆ ತಾಯಿಯ ಮೆದುಳು ಗಂಭೀರವಾಗಿ ಘಾಸಿಗೊಳ್ಳಬಹುದು. ಹಾಗೂ ಶಿಶುವಿಗೆ ಹೃದಯ ಸಂಬಂಧಿಸಿದ ಗಂಭೀರ ಕಾಯಿಲೆಗಳು ಇರುವುದರಿಂದ ಜನಿಸಿದ ಬಳಿಕ ಹಲವು ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದು ಕೋಲ್ಕತಾದ ಎಸ್‌ಎಸ್‌ಕೆಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ವೈದ್ಯಕೀಯ ಮಂಡಳಿಯ ವರದಿ ಗಮನಿಸಿ ಮನವಿಗೆ ಮಾನ್ಯತೆ ನೀಡಿದೆವು ಹಾಗೂ ಗರ್ಭಪಾತ ನಡೆಸುವಂತೆ ಮಹಿಳೆಗೆ ನಿರ್ದೇಶಿಸಿದ್ದೇವೆ ಎಂದು ಪೀಠ ಹೇಳಿದೆ.
ಭ್ರೂಣದ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ಮಹಿಳೆ ಹಾಗೂ ಆಕೆಯ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
Next Story





