ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪು ಹತ್ಯೆ

ರಾಂಚಿ, ಜು. 3: ಅತ್ಯಾಚಾರ ಹಾಗೂ ಕೊಲೆ ಆರೋಪಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆ ನಡೆಸಿದ ಘಟನೆ ರಾಮ್‌ಗಢ ಜಿಲ್ಲೆಯ ದುಮ್ಕಾಸ್‌ನ ಜಲ್ವಾ ಗ್ರಾಮದಲ್ಲಿ ನಡೆದಿದೆ. ಕಳೆದು ಒಂದು ವಾರದಲ್ಲಿ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಮೂರನೇ ಗುಂಪು ಹತ್ಯೆ ಪ್ರಕರಣ ಇದಾಗಿದೆ. ಎರಡು ದಿನಗಳ ಹಿಂದೆ ಮಿಥುನ್ ಹನ್‌ಸ್ದಾ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದು ನದಿಗೆ ಎಸೆದ ಎಂದು ಆರೋಪಿಸಲಾಗಿತ್ತು.
ಗ್ರಾಮಸ್ಥರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಮಿಥುನ್ ಬಗ್ಗೆ ಗ್ರಾಮಪಂಚಾಯತ್ ಸಮಿತಿ ಶಂಕೆ ವ್ಯಕ್ತಪಡಿಸಿ ಸಾರ್ವಜನಿಕ ವಿಚಾರಣೆಗೆ ಬುಧವಾರ ನೊಟೀಸ್ ಜಾರಿ ಮಾಡಿತ್ತು. ವಿಚಾರಣೆ ಸಂದರ್ಭ ಬಾಲಕಿ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು. ಆತ, ತಾನು ಬಾಲಕಿಯನ್ನು ಮಂಗಳವಾರ ನದಿ ಸಮೀಪ ನೋಡಿರುವುದಾಗಿ ಸಮಿತಿಗೆ ತಿಳಿಸಿದ. ಆದರೆ, ಆಕೆಗೆ ತೊಂದರೆ ನೀಡಿದ್ದೇನೆ ಎನ್ನುವುದನ್ನು ನಿರಾಕರಿಸಿದ.
ಗುರುವಾರ ಬೆಳಗ್ಗೆ ಪಂಚಾಯತ್ ಸಮಿತಿ ನಾಪತ್ತೆಯಾಗಿರುವ ಬಾಲಕಿಯನ್ನು ಹುಡುಕುವಂತೆ ಗ್ರಾಮಸ್ಥರ ತಂಡವೊಂದಕ್ಕೆ ತಿಳಿಸಿತ್ತು. ತಂಡ ಬಾಲಕಿಯ ಮೃತದೇಹವನ್ನು ನದಿ ದಂಡೆಯಲ್ಲಿ ಪತ್ತೆ ಮಾಡಿತ್ತು. ಕೂಡಲೇ ತಂಡ ಬಾಲಕಿಯನ್ನು ಮಿಥುನ್ ಅತ್ಯಾಚಾರ ಮಾಡಿ ಹತ್ಯೆಗೈದಿದ್ದಾನೆ ಎಂಬ ತೀರ್ಮಾನಕ್ಕೆ ಬಂದಿತು. ಉದ್ರಿಕ್ತರಾದ ಗ್ರಾಮಸ್ಥರು ಮಿಥುನ್‌ನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದರು.
ಗಂಭೀರ ಗಾಯಗೊಂಡ ಮಿಥನ್ ಸ್ಥಳದಲ್ಲೇ ಮೃತಪಟ್ಟ. ಬಾಲಕಿ ಹಾಗೂ ಹನ್ಸ್‌ದ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿ ಕೊಡಲಾಗಿದೆ. ಬಾಲಕಿಯ ಮೇಲೆ ಅತ್ಯಾಚಾರವಾಗಿದೆಯೋ ಇಲ್ಲವೋ ಎಂಬುದು ಶವ ಪರೀಕ್ಷೆ ಅನಂತರ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.







