ಮನಪಾ: 300 ಟನ್ ತ್ಯಾಜ್ಯ ಉತ್ಪತ್ತಿ; ಎಪಿಡಿಯಿಂದ ಜಾಗೃತಿ ಕಾರ್ಯಕ್ರಮ
ಮಂಗಳೂರು. ಜು. 3: ಆ್ಯಂಟಿ -ಪೊಲ್ಯೂಶನ್ ಡ್ರೈವ್ (ಎಪಿಡಿ) ಸಾರ್ವಜನಿಕ ಟ್ರಸ್ಟ್ ವತಿಯಿಂದ ಮಂಗಳೂರು ನಗರದಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಂಗಳೂರು ನಗರದಲ್ಲಿ ದಿನವೊಂದಕ್ಕೆ 300 ಟನ್‌ಗೂ ಅಧಿಕ ತ್ಯಾಜ್ಯ ಉತ್ಫಾದನೆಯಾಗುತ್ತಿದೆ. ಟ್ರಸ್ಟ್ ಕಸ ವಿಂಗಡಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ಎಪಿಡಿಯ ಸ್ಥಾಪಕ ಅಬ್ದುಲ್ ಎ ರಹ್ಮಾನ್ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಬಗ್ಗೆ ಜನ ಜಾಗೃತಿಗಾಗಿ ಎಪಿಡಿ ಜನ ಸಂಯೋಜಿತ ವೆಬ್ ಸೈಟನ್ನು ಮತ್ತು ಟೂಲ್ ಕಿಟ್ಟನ್ನು ಅಭಿವೃದ್ಧಿ ಪಡಿಸಿದೆ. ಕಳೆದ 12 ತಿಂಗಳಿನಿಂದ 15 ಯೋಜನೆಗಳ ಮೂಲಕ 45 ಶಾಲೆಗಳ 10 ಸಾವಿರ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದೆ. 32 ತಳಮಟ್ಟದ ಕ್ಯಾಂಪ್‌ಗಳು ,32 ರೋಡ್ ಶೋಗಳು, 20 ಸಾವಿರ ಭಿತ್ತಿ ಪತ್ರಗಳು, 400 ಆಟೋ ರಿಕ್ಷಾಗಳ ಪ್ರಭಾವಿ ಕ್ಯಾಂಪ್ ಮೂಲಕ ಮಾಹಿತಿ, ಶಿಕ್ಷಣ ಜಾಗೃತಿ ಮೂಡಿಸಿದೆ.
ನಗರದಲ್ಲಿ ವಾಯು ಮಾಲಿನ್ಯದ ಮೂಲವನ್ನು ಪತ್ತೆ ಹಚ್ಚುವ ಉದ್ದೇಶದೊಂದಿಗೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರು ನಗರದಲ್ಲಿ ತ್ಯಾಜ್ಯವನ್ನು ಪ್ರತ್ಯೇಕಿಸದೆ ಇದ್ದರೆ ಅದರ ನಿರ್ವಹಣೆ ಒಂದು ಸವಾಲಾಗುತ್ತದೆ ಮತ್ತು ಅದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಆ್ಯಂಟನಿ ವೇಸ್ಟ್ ಹ್ಯಾಂಡ್ಲಿಗ್ ಸೆಲ್ ಪ್ರೈ ವೇಟ್ ಲಿಮಿಟೆಡ್ ನೊಂದಿಗೆ ಎಪಿಡಿ ಕಾರ್ಯತಂತ್ರ ಪಾಲುದಾರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಚಟುವಟಿಕೆಗೆ ಯು.ಎನ್ .ಹ್ಯಾಬಿಟೇಟ್ ಪುರಸ್ಕಾರ ದೊರೆತಿದೆ ಎಂದು ರಹ್ಮಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆ್ಯಂಟೊನಿ ವೇಸ್ಟ್ ಪ್ರೈ.ಲಿ.ಸಂಯೋಜಕ ರಕ್ಷಿತ್ ಶೆಟ್ಟಿ, ಎಪಿಡಿ ಸಂಯೋಜಕರಾದ ರೂಹಿಯಾ, ನೆಹಾ ಶೆಣೈ, ನವೀನ್ ಡಿ ಸೋಜ, ಧನುಜ್, ರಮೇಶ್ ಸಲಹೆಗಾರ ಆಸಿಫ್ ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.







