ಸಮುದ್ರ ನೀರು ಶುದ್ಧೀಕರಿಸುವ ಬದಲು ತುಂಬೆ ಡ್ಯಾಂ 7 ಮೀ.ಗೆ ಎತ್ತರಿಸಲಿ: ಐವನ್
ಮಂಗಳೂರು, ಜು. 3: ನಗರವನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕಲ್ಪಿಸಲು ಸಮುದ್ರ ನೀರು ಶುದ್ಧೀಕರಿಸುವ ಯೋಜನೆಗಿಂತ ತುಂಬೆಯ ನೂತನ ವೆಂಟೆಡ್ ಡ್ಯಾಂ ಮಟ್ಟವನ್ನು 7 ಮೀ. ಎಚ್ಚರಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ತಗಲುವ 250 ಕೋಟಿ ರೂ.ಗಳನ್ನು ಮುಂದಿನ ರಾಜ್ಯ ಬಜೆಟ್‌ನಲ್ಲಿ ಮೀಸಲಿರಿಸಬೇಕು ಎಂದೂ ಅವರು ಹೇಳಿದ್ದಾರೆ.
ನಗರಕ್ಕೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದೆ. ತುಂಬೆ ಡ್ಯಾಂ ಮಟ್ಟವನ್ನು 7 ಮೀ. ಎತ್ತರಿಸಿದರೆ 367.97 ಎಕರೆ ಖಾಸಗಿ ಜಮೀನು ಸೇರಿದಂತೆ ಒಟ್ಟು 477 ಎಕರೆ ಮುಳುಗಡೆಯಾಗಲಿದ್ದು, ರೈತರಿಗೆ ಪರಿಹಾರ ನೀಡಲು 250 ಕೋಟಿ ರೂ.ಗಳ ಅಗತ್ಯವಿದೆ ಎಂಬ ಉತ್ತರ ದೊರೆತಿದೆ ಎಂದು ಐವನ್ ತಿಳಿಸಿದರು.
ಸಮುದ್ರ ನೀರನ್ನು ಶುದ್ಧೀಕರಿಸಿ ಪೂರೈಸುವ ಪ್ರಸ್ತಾಪವೂ ಇದ್ದು, ಈ ಬಗ್ಗೆ ಈಗಾಗಲೇ ಒಂದು ತಂಡ ಚೆನ್ನೈಗೆ ತೆರಳಿ ಅಧ್ಯಯನ ನಡೆಸಿದೆ. ಆದರೆ, ಯೋಜನೆಗೆ ಸಾವಿರಾರು ಕೋಟಿ ರೂ. ವೆಚ್ಚ ತಗಲಬಹುದು. ಆದ್ದರಿಂದ ಸಮುದ್ರ ನೀರನ್ನು ಶುದ್ಧೀಕರಿಸುವ ಯೋಜನೆಯ ಬದಲು ತುಂಬೆ ಡ್ಯಾಂ ಮಟ್ಟ ಎತ್ತರಿಸಿ ಕೇವಲ 250 ಕೋಟಿ ರು.ಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸುವುದು ಸಾಧ್ಯ ಇದೆ. ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದರು.ಸಂಸದರು ಹೆದ್ದಾರಿ ಕಾಮಗಾರಿಗಳ ಬಗ್ಗೆ ಗಮನ ಹರಿಸಲಿಹಲವು ಸಮಯಗಳಿಂದ ಜಿಲ್ಲೆಯ ಹೆದ್ದಾರಿಗಳ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಜಿಲ್ಲೆಯ ಸಂಸದರು ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತೂರಿನಲ್ಲಿ ಸಂಚಾರ ದಟ್ಟಣೆ ನೀಗಿಸುವ ಅಂಡರ್‌ಪಾಸ್ ನಿರ್ಮಾಣ ಪ್ರಸ್ತಾಪ ಹಲವು ಸಮಯಗಳಿಂದ ನೆನೆಗುದಿಗೆ ಬಿದ್ದಿದೆ. ನಂತೂರಿನಲ್ಲಿ ಅನೇಕ ಜೀವಹಾನಿಯಾಗಿದ್ದರೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ, ಸುರತ್ಕಲ್- ಮಂಗಳೂರು, ಬಿ.ಸಿ.ರೋಡ್- ಮಂಗಳೂರು ಹೆದ್ದಾರಿ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಆದರೆ ಟೋಲ್ ಸಂಗ್ರಹ ಮಾತ್ರ ಚಾಚೂ ತಪ್ಪದೆ ಮಾಡಲಾಗುತ್ತಿದೆ ಎಂದು ಐವನ್ ಹೇಳಿದರು.
ರಾಜ್ಯದಲ್ಲಿ ನರ್ಸಿಂಗ್ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಮಾನ್ಯತೆ ಇಲ್ಲದಂತಾಗಿದೆ. ಅಲ್ಲದೆ ಇತರ ರಾಜ್ಯಗಳಲ್ಲಿ ಉದ್ಯೋಗಾವಕಾಶಗಳೂ ಇಲ್ಲ ಎಂದು ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಆದೇಶ ಹೊರಡಿಸಿದ್ದು, ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ. ಈ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದವರು ತಿಳಿಸಿದರು.
ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಮುಖಂಡರಾದ ಡಿ.ಕೆ.ಅಶೋಕ್, ಮೇಯರ್ ಅಶ್ರಫ್, ಶಾಹುಲ್ ಹಮೀದ್ ಹಳೆಯಂಗಡಿ, ಸತೀಶ್ ಪೆಂಗಾಲ್ ಮೊದಲಾದವರು ಉಪಸ್ಥಿತರಿದ್ದರು.







