ಕ್ರಿಕೆಟ್‌ನ 'ಅದ್ಭುತ ಬಾಲಕ'ಪ್ರಣವ್ ಧನವಡೆಗೆ ರಿಯಾಲಿಟಿ ಚೆಕ್!

ಮುಂಬೈ, ಜು.4: ಇನಿಂಗ್ಸ್‌ವೊಂದರಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್, 'ಕ್ರಿಕೆಟ್‌ನ ಅದ್ಭುತ ಬಾಲಕ'ನೆಂದು ಖ್ಯಾತಿ ಪಡೆದಿರುವ ಪ್ರಣವ್ ಧನವಡೆ ರಿಯಾಲಿಟಿ ಚೆಕ್‌ಗೆ ಗುರಿಯಾಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಶಾಲಾ ಪಂದ್ಯದಲ್ಲಿ 1009 ರನ್ ಗಳಿಸಿದ ಮಹಾನ್ ಸಾಧನೆಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಧನವಡೆಗೆ ಐದು ವರ್ಷಗಳ ಕಾಲ ಪ್ರತಿ ತಿಂಗಳು 10,000 ರೂ. ವಿದ್ಯಾರ್ಥಿ ವೇತನ ನೀಡುವುದಾಗಿ ಕಳೆದ ವರ್ಷ ಘೋಷಣೆ ಮಾಡಿತ್ತು. ಒಂದು ವರ್ಷ ಕಾಲ ವಿದ್ಯಾರ್ಥಿ ವೇತನ ನೀಡಿರುವ ಎಂಸಿಎ ಕಳೆದ 6 ತಿಂಗಳುಗಳಿಂದ ವಿದ್ಯಾರ್ಥಿ ವೇತನ ನೀಡಿಲ್ಲ. ಈ ವಿಳಂಬಕ್ಕೆ ಕಾರಣವೇನೆಂದು ಧನವಡೆ ಹೆತ್ತವರಿಗೆ ಗೊತ್ತಿಲ್ಲ.
ಎಂಸಿಎ ಎರಡನೆ ವರ್ಷದ ವಿದ್ಯಾರ್ಥಿ ವೇತನ ನೀಡುವ ಮೊದಲು ಧನವಡೆ ಪ್ರದರ್ಶನವನ್ನು ಪರಾಮರ್ಶೆ ನಡೆಸಲಿದೆ.
ವಿದ್ಯಾರ್ಥಿ ವೇತನ ಘೋಷಣೆಯ ವೇಳೆ ಪ್ರತಿವರ್ಷ ಆಟಗಾರನ ಕ್ರಿಕೆಟ್ ಹಾಗೂ ವಿದ್ಯಾರ್ಥಿ ಚಟುವಟಿಕೆಗಳನ್ನು ಪರಾಮರ್ಶಿಸಲಿದೆ ಎಂದು ಎಂಸಿಎ ಹೇಳಿತ್ತು. ಈ ವರ್ಷ ಈತನಕ ಪರಾಮರ್ಶೆ ನಡೆದಿಲ್ಲ. ಪರಾಮರ್ಶೆಯ ಬಳಿಕ ಆಡಳಿತ ಮಂಡಳಿಗೆ ವರದಿ ನೀಡಲಾಗುತ್ತದೆ. ಮಂಡಳಿಯು ವಿದ್ಯಾರ್ಥಿ ವೇತನ ಮುಂದುವರಿಸಬೇಕೇ, ಬೇಡವೇ ಎಂದು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಎಂಸಿಎ ಜೊತೆ ಕಾರ್ಯದರ್ಶಿ ಉನ್ಮೇಶ್ ಖಾನ್ವೀಕರ್ ಹೇಳಿದ್ದಾರೆ.
ಕೆ.ಸಿ. ಗಾಂಧಿ ಶಾಲಾ ವಿದ್ಯಾರ್ಥಿಯಾಗಿರುವ ಧನವಡೆ ಎಂಸಿಎ 2016ರ ಜನವರಿಯಲ್ಲಿ ಆಯೋಜಿಸಿದ್ದ ಅಂತರ್‌ಶಾಲಾ ಪಂದ್ಯದಲ್ಲಿ ವಿಶ್ವ ದಾಖಲೆಯ ವೈಯಕ್ತಿಕ ಸ್ಕೋರ್ ದಾಖಲಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು.
"ಈ ವರ್ಷದ ಆರು ತಿಂಗಳು ಕಳೆದರೂ ಎಂಸಿಎ ವಿದ್ಯಾರ್ಥಿ ವೇತನ ಲಭಿಸಿಲ್ಲ. ಎಂಸಿಎ ಯಾವ ನಿರ್ಧಾರ ತಳೆದಿದೆ ಎಂದು ನಮಗೆ ಗೊತ್ತಿಲ್ಲ. ನಾನು ಎಂಸಿಎಯನ್ನು ಸಂಪರ್ಕಿಸಿಲ್ಲ. ಅಲ್ಲಿ ಯಾರನ್ನು ಸಂಪರ್ಕಿಸಬೇಕೆಂದು ತಿಳಿದಿಲ್ಲ'' ಎಂದು ಧನವಡೆಯ ತಂದೆ ಪ್ರಶಾಂತ್ ಹೇಳಿದ್ದಾರೆ.







