ಕೇರಳದ ಫುಟ್ಬಾಲ್ ಆಟಗಾರ ಬಿಡುವಿನ ವೇಳೆ ಏನು ಮಾಡುತ್ತಾರೆ ಗೊತ್ತೇ?
ಅವರ ಈ ಕಾಯಕ ಎಲ್ಲ ಯುವಕರಿಗೆ ಸ್ಫೂರ್ತಿ

ಬೆಂಗಳೂರು,ಜು.4: ಫುಟ್ಬಾಲ್ ಆಟಗಾರರು ಕ್ರೀಡೆಯಿಂದ ದೀರ್ಘ ಕಾಲ ವಿರಾಮ ಲಭಿಸಿದಾಗ ತಮ್ಮ ದೇಹವನ್ನು ಹುರಿಗೊಳಿಸುವ ಜೊತೆಗೆ ಮುಂಬರುವ ಋತುವಿನಲ್ಲಿ ಗಾಯಾಳು ರಹಿತವಾಗಿರಲು ಹೆಚ್ಚಿನ ಗಮನ ನೀಡುತ್ತಾರೆ. ರಾಷ್ಟ್ರೀಯ ಹಾಗೂ ಕ್ಲಬ್ ಪಂದ್ಯಗಳ ನಿಮಿತ್ತ ದೇಶ-ವಿದೇಶ ಸುತ್ತುವ ಆಟಗಾರರು ಹೆಚ್ಚಿನ ಸಮಯ ಕುಟುಂಬ ಸದಸ್ಯರಿಂದ ದೂರವಿರುತ್ತಾರೆ. ಹಾಗಾಗಿ ಬಿಡುವಿನ ವೇಳೆ ಕುಟುಂಬದವರೊಂದಿಗೆ ಸಮಯ ಕಳೆಯಲು ಆದ್ಯತೆ ನೀಡುತ್ತಾರೆ.
ಸಿ.ಕೆ. ವಿನೀತ್ ಫುಟ್ಬಾಲ್ ಅಂಗಣದಲ್ಲಿ ಬಿಡುವು ಸಿಕ್ಕರೆ ಸೀದಾ ಕೃಷಿ ಅಂಗಣಕ್ಕೆ ಕಾಲಿಡುತ್ತಾರೆ! ಕೇರಳದ ಕಣ್ಣೂರು ಜಿಲ್ಲೆಯ ವೆಂಗಾಡ್‌ನ ಸಣ್ಣ ಹಳ್ಳಿಯಿಂದ ಬಂದಿರುವ ವಿನೀತ್ ಫುಟ್ಬಾಲ್‌ನಿಂದ ಬಿಡುವು ಪಡೆದಾಗಲೆಲ್ಲಾ ತಂದೆಗೆ ಕೃಷಿ ಚಟುವಟಿಕೆಗಳಲ್ಲಿ ನೆರವಾಗುತ್ತಾರೆ.
ಮಗನಾಗಿ ತಂದೆಗೆ ನೆರವಾಗುವುದು ನನ್ನ ಕರ್ತವ್ಯ. ಮನೆಗೆ ವಾಪಸಾಗಲು ಸಮಯ ಲಭಿಸಿದಾಗಲೆಲ್ಲಾ ಕೃಷಿ ಭೂಮಿಯಲ್ಲಿ ತನ್ನ ತಂದೆಗೆ ನೆರವಾಗಲು ಯತ್ನಿಸುವೆ ಎಂದು ಆಲ್ ಇಂಗ್ಲೆಂಡ್ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ವಿನೀತ್ ತಿಳಿಸಿದ್ದಾರೆ.
ಬಿಡುವಿಲ್ಲದ ಫುಟ್ಬಾಲ್ ಋತು ಕೊನೆಗೊಂಡ ತಕ್ಷಣ ನಾನು ನನ್ನ ಹಳ್ಳಿಗೆ ತೆರಳಲು ಇಷ್ಟಪಡುತ್ತೇನೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಇದು ಯಾವಾಗಲೂ ಅನನ್ಯ ಅನುಭವ ನೀಡುತ್ತದೆ ಎಂದು ಬೆಂಗಳೂರು ಎಫ್‌ಸಿ ಆಟಗಾರನಾಗಿರುವ ವಿನೀತ್ ಹೇಳಿದ್ದಾರೆ.
ಕೃಷಿ ಭೂಮಿ ನಮ್ಮ ಮನೆಯ ಎದುರುಗಡೆಯಿದೆ. ನನ್ನ ತಂದೆ ನಾಲ್ಕು ವರ್ಷಗಳ ಹಿಂದೆ ಉದ್ಯೋಗದಿಂದ ನಿವೃತ್ತಿಯಾಗಿದ್ದಾರೆ. ಉದ್ಯೋಗದಲ್ಲಿದ್ದಾಗ ಬಿಡುವಿನ ವೇಳೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಇದೀಗ ಅವರು ಹೆಚ್ಚಿನ ಸಮಯ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ವಿನೀತ್ ಹೇಳಿದ್ದಾರೆ.







