ಮಾಯಣ್ಣ ವಿರುದ್ಧ ರಾಬರ್ಟ್ ನೀಡಿರುವ ದೂರು ಸುಳ್ಳು
ಬೆಂಗಳೂರು, ಜು.4: ಕಸಾಪ ಅಧ್ಯಕ್ಷ ಮಾಯಣ್ಣ ರನ್ನು ಅವಮಾನಿಸುವ ಹಾಗೂ ಕಿರುಕುಳ ನೀಡುವ ಉದ್ದೇಶದಿಂದ ಅವರ ವಿರುದ್ಧ ರಾಬರ್ಟ್ ಎಂಬುವವರು ಸುಳ್ಳು ದೂರುಗಳನ್ನು ದಾಖಲಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕಾನೂನು ಸಲಹೆಗಾರ ನಂಜಪ್ಪಕಾಳೇಗೌಡ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಯಣ್ಣ ವಿರುದ್ಧದ 109 ಕೋಟಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಬರ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದೂರನ್ನು ಹೈ ಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಹತಾಶೆಗೊಂಡ ರಾಬರ್ಟ್ ಮರುದಿನವೇ ಮಾಯಣ್ಣ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ ಎಂದು ಹೇಳಿದರು.
ಆದರೆ, ಈ ದೂರಿನಲ್ಲಿ ಯಾವುದೆ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. 1964-65ರಿಂದ 2013-14ರವರೆಗೆ ಒಟ್ಟು 3 ಸಾವಿರದ 415 ಕೋಟಿ, 50 ಲಕ್ಷ ರೂ.ಗಳ ಆಕ್ಷೇಪಣೆಯು ಲೆಕ್ಕಪರಿಶೋಧಕರ ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿ ಅನ್ವಯ ನೂರಾರು ಅಧಿಕಾರಿಗಳು, ಗುಮಾಸ್ತರು, ಅಭಿಯಂತರರು ಹಾಗೂ ಗುತ್ತಿಗೆದಾರರ ಹೆಸರನ್ನು ನಮೂದಿಸಲಾಗಿದೆ. ಇವರೆಲ್ಲರನ್ನು ಹೊರತುಪಡಿಸಿ ಮಾಯಣ್ಣ ವಿರುದ್ಧ ದೂರು ಸಲ್ಲಿಸಿರುವುದು ವೈಯಕ್ತಿಕ ದ್ವೇಷದಿಂದ ಕೂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿರುವ ರಾಬರ್ಟ್ ವಿಚಾರಣೆಗಾಗಿ ಸೂಕ್ತ ದಾಖಲೆಗಳನ್ನು ಒದಗಿಸದೆ ಸಮಯ ಕೇಳಿ ಕಾಲಾಹರಣ ಮಾಡುತ್ತಿದ್ದಾರೆ. ಹಾಗೂ ವಿಚಾರಣೆ ಮುಂದೂಡಲು ಕಾರಣರಾಗಿದ್ದಾರೆ ಎಂದ ಅವರು, ರಾಬರ್ಟ್‌ನ ಸುಳ್ಳು ದೂರನ್ನಾಧರಿಸಿ ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ಅನಗತ್ಯ ಮಾಯಣ್ಣ ಅವರ ವಿರುದ್ಧ ಅಪಪ್ರಚಾರ ಮಾಡಬಾರದು ಎಂದು ಮನವಿ ಮಾಡಿದರು.







