ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ಕಾಲ ಸನ್ನಿಹಿತ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಜು. 4: ಜೆಡಿಎಸ್ ಪಕ್ಷವನ್ನು ಸರ್ವನಾಶ ಮಾಡುವ ಅಜೆಂಡಾ ಇಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಅಧಿಕಾರ ಸ್ಥಾನವನ್ನು ಖಾಲಿ ಮಾಡಿ ಹಿಂದೆ ಇದ್ದ ಸ್ಥಾನಕ್ಕೆ ಹೋಗುವ ಕಾಲ ಆರಂಭವಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್, ವಿರಾಜಪೇಟೆಯ ಮಾಜಿ ಶಾಸಕ ಎಚ್.ಡಿ.ಬಸವರಾಜು, ತೇರದಾಳದ ಬಸವರಾಜು ಕೊಲ್ಲೂರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.
ಜೆಡಿಎಸ್ ಪಕ್ಷದಲ್ಲಿ ಬೆಳೆದವರೇ ಇಂದು ಜೆಡಿಎಸ್ ಅನ್ನು ಸರ್ವನಾಶ ಮಾಡುವ ಅಜೆಂಡಾ ಇಟ್ಟುಕೊಂಡಿದ್ದಾರೆ. ಆ ವ್ಯಕ್ತಿ ಈಗಿರುವ ಸ್ಥಾನವನ್ನು ಖಾಲಿ ಮಾಡಿ ಹಳೆಯ ಸ್ಥಾನಕ್ಕೆ ಹೋಗಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಹೇಳದೆ ಗುಡುಗಿದರು. ಈ ಕೆಲಸ ಎಚ್.ವಿಶ್ವನಾಥ್ ಅವರಿಂದಲೇ ಆರಂಭವಾಗಿದೆ ಎಂದು ಎಂದು ಹೇಳಿದರು.
ಅವರು(ಸಿದ್ದರಾಮಯ್ಯ) ಮೊದಲು ಜೆಡಿಎಸ್‌ನಲ್ಲಿದ್ದಾಗ ಆ ವ್ಯಕ್ತಿ ವ್ಯಕ್ತಿಯಲ್ಲ, ಅದೊಂದು ಶಕ್ತಿ ಎಂದು ರಾಜ್ಯದಲ್ಲಿ ಬಿಂಬಿಸಬೇಕು ಎಂದು ಎಚ್.ಡಿ ದೇವೇಗೌಡರು ಭಾವಿಸಿದ್ದರು. ಇದನ್ನು ನಾನು ರಾಜಕಾರಣಕ್ಕೆ ಪ್ರವೇಶ ಮಾಡುವ ಮುಂಚಿನ ದಿನಗಳಲ್ಲಿ ಬಹಳ ಹತ್ತಿರದಿಂದ ಕಂಡಿದ್ದೇನೆ. ಹಿಂದೆ ಬಂದ ದಾರಿಯನ್ನು ಅವರು ಮರೆತಿದ್ದಾರೆ. ಈಗ ಕಾಂಗ್ರೆಸ್‌ಗೆ ಹೋಗಿ ಜೆಡಿಎಸ್ ಅನ್ನು ಸರ್ವನಾಶ ಮಾಡುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಎಚ್.ವಿಶ್ವನಾಥ್ ಅವರೇ ಕರೆದುಕೊಂಡು ಹೋಗಿದ್ದು. ಅವರಿನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಏಳೆಂಟು ವರ್ಷಗಳಾಗಿಲ್ಲ. ಆದರೆ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದ ವಿಶ್ವನಾಥ್ ಅವರನ್ನೇ ಪಕ್ಷದಿಂದ ಹೊರ ಕಳಿಸಿದ್ದಾರೆ. ಸಿದ್ದರಾಮಯ್ಯ ಅವರ ನಡೆಯನ್ನು ವಿರೋಧ ಪಕ್ಷಗಳು ಖಂಡಿಸುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದೊಳಗಿರುವವರ ಕೆಂಗಣ್ಣಿಗೆ, ಟೀಕೆಗೆ ಗುರಿಯಾಗಿದ್ದಾರೆ ಎಂದು ಹೇಳಿದರು.
ಇವತ್ತಿನ ರಾಜಕಾರಣದಲ್ಲಿ ಪಕ್ಷ ನಿಷ್ಠೆ ಎಂಬುದು ಮರೆಯಾಗುತ್ತಿದೆ. ಎಚ್.ವಿಶ್ವನಾಥ್ ಮಾನಸಿಕವಾಗಿ ಬಹಳಷ್ಟು ನೊಂದಿದ್ದಾರೆ. ಜೆಡಿಎಸ್ ಮನೆಯ ಆಶ್ರಯ ಪಡೆಯಲು ಯಾರೇ ಬಂದರೂ ಅವರಿಗೆ ಹೃದಯ ತುಂಬಿ ಸ್ವಾಗತ ನೀಡುತ್ತೇವೆ ಎಂದರು.
ಜೆಡಿಎಸ್ ಪಕ್ಷ ರಾಜ್ಯಕ್ಕೆ ಅನಿವಾರ್ಯ. ರಾಜ್ಯದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಜೆಡಿಎಸ್‌ನಿಂದಲೇ ಸಾಧ್ಯ. ನಾವು ಹಣ, ಆಸ್ತಿ ಸಂಪಾದನೆ ಮಾಡಲು ಅಧಿಕಾರದ ಹಿಂದೆ ಹೋಗುತ್ತಿಲ್ಲ. ರಾಜ್ಯಕ್ಕೆ ಹೊಸ ರಾಜಕಾರಣ ಮೈಸೂರು ಜಿಲ್ಲೆಯಿಂದಲೇ ಆರಂಭವಾಗಲಿದೆ. ಮುಂದಿನ ಚುನಾವಣೆಯಲ್ಲಿ ಮೈಸೂರಿನ 11 ವಿಧಾನಸಭಾ ಕ್ಷೇತ್ರದಲ್ಲಿ 10 ಕ್ಷೇತ್ರಗಳು ಜೆಡಿಎಸ್ ಗೆಲಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಬಳಿಯೂ ಇದೆ ಸಮೀಕ್ಷೆ..
ರಾಜ್ಯದಲ್ಲಿ ಜೆಡಿಎಸ್‌ಗೆ 15, 20 ಸ್ಥಾನ ಬರಲಿದೆ ಎಂಬ ಗುಂಗಿನಲ್ಲೇ ಕೆಲವರು ಈಗಲೂ ಇದ್ದಾರೆ. ಜೆಡಿಎಸ್‌ನ ನಿಜವಾದ ಶಕ್ತಿ ಏನು ಎಂಬುವುದು ನಮಗೂ ಗೊತ್ತಿದೆ. ನಾನೂ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮೀಕ್ಷೆ ಮಾಡಿ ಇಟ್ಟುಕೊಂಡಿದ್ದೇನೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ







