ಉಪರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಪ್ರಕಟ

ಹೊಸದಿಲ್ಲಿ,ಜು.4: ಚುನಾವಣಾ ಆಯೋಗವು ಆ.5ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗಾಗಿ ಅಧಿಸೂಚನೆಯನ್ನು ಹೊರಡಿಸುವುದರೊಂದಿಗೆ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದೆ.
ಆಡಳಿತ ಎನ್‌ಡಿಎ ಮತ್ತು ಪ್ರತಿಪಕ್ಷ ಉಪರಾಷ್ಟ್ರಪತಿ ಹುದ್ದೆಗಾಗಿ ತಮ್ಮ ಅಭ್ಯರ್ಥಿಗಳನ್ನು ಈವರೆಗೆ ಪ್ರಕಟಿಸಿಲ್ಲ.
ಸತತ ಎರಡು ಅವಧಿಗಳಿಗೆ ಹುದ್ದೆಯನ್ನು ನಿರ್ವಹಿಸಿರುವ ಹಾಲಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರ ಅಧಿಕಾರಾವಧಿಯು ಆ.10ರಂದು ಅಂತ್ಯಗೊಳ್ಳಲಿದೆ.
ಲೋಕಸಭೆಯಲ್ಲಿ ಬಹುಮತ ಹೊಂದಿರುವ ಮತ್ತು ರಾಷ್ಟ್ರಪತಿ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಡಿಯಂತಹ ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿರುವ ಎನ್‌ಡಿಎಗೆ ಮುಂದಿನ ಉಪರಾಷ್ಟ್ರಪತಿಯಾಗಿ ತನ್ನ ಅಭ್ಯರ್ಥಿಯನ್ನು ಪ್ರತಿಷ್ಠಾಪಿಸುವುದು ಸುಲಭವಾಗಲಿದೆ.
ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆಗೆ ಜು.18 ಕೊನೆಯ ದಿನ ವಾಗಿದ್ದು, ಜು.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಜುಲೈ 21 ಅಂತಿಮ ದಿನವಾಗಿದೆ.
ಮತದಾನ, ಅಗತ್ಯವಾದರೆ ಆ.5ರಂದು ನಡೆಯಲಿದೆ ಮತ್ತು ಅದೇ ದಿನ ಸಂಜೆ ಮತಗಳ ಎಣಿಕೆ ನಡೆಯುವುದು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಗೆ 20 ಸೂಚಕರು ಮತ್ತು 20 ಅನುಮೋದ ಕರ ಅಗತ್ಯವಿದೆ ಮತ್ತು ಇವರೆಲ್ಲರೂ ಸಂಸದರಾಗಿರಬೇಕು.
ತಮ್ಮ ಆಯ್ಕೆಯನ್ನು ಸೂಚಿಸಲು ಸಂಸದರು ವಿಶೇಷ ಪೆನ್ ಬಳಸಲಿದ್ದಾರೆ. ಚುನಾವಣೆಯು ಗುಪ್ತ ಮತದಾನದ ಮೂಲಕ ನಡೆಯುವುದರಿಂದ ರಾಜಕೀಯ ಪಕ್ಷಗಳು ಸಚೇತಕಾಜ್ಞೆಯನ್ನು ಹೊರಡಿಸುವಂತಿಲ್ಲ.
ಕಳೆದ ವರ್ಷ ಹರ್ಯಾಣದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಶಾಯಿ ವಿವಾದ ತಲೆದೋರಿದ ಬಳಿಕ ಚುನಾವಣಾ ಆಯೋಗವು ಜು.17ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಮತ್ತು ಆ.5ರ ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಮತದಾರರು ತಮ್ಮ ಆಯ್ಕೆಯನ್ನು ಸೂಚಿಸಲು ವಿಶೇಷ ಪೆನ್‌ಗಳನ್ನು ಬಳಸಲು ನಿರ್ಧರಿಸಿದೆ. ಇತರ ಪೆನ್‌ಗಳಿಂದ ಗುರುತು ಮಾಡುವ ಮತಗಳು ತಿರಸ್ಕೃತಗೊಳ್ಳಲಿವೆ.
ಉಪರಾಷ್ಟ್ರಪತಿ ಚುನಾವಣೆಗೆ ರಾಜ್ಯಸಭೆಯ ಮಹಾ ಕಾರ್ಯದರ್ಶಿ ಶಂಶೇರ್ ಕೆ. ಶರೀಫ್ ಅವರು ಚುನಾವಣಾಧಿಕಾರಿಯಾಗಿದ್ದು, ರಾಜ್ಯಸಭೆ ಮತ್ತು ಲೋಕಸಭೆಗಳ ಚುನಾಯಿತ ಮತ್ತು ನಾಮಕರಣ ಸದಸ್ಯರು ಮತದಾರರಾಗಿದ್ದಾರೆ.
ಉಭಯ ಸದನಗಳ ಒಟ್ಟು ಬಲ 790 ಆಗಿದೆಯಾದರೂ ಕೆಲವು ಸ್ಥಾನಗಳು ಖಾಲಿಯಿವೆ.
545 ಸದಸ್ಯಬಲದ ಲೋಕಸಭೆಯಲ್ಲಿ ಬಿಜೆಪಿ 281 ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ 338 ಸದಸ್ಯರನ್ನು ಹೊಂದಿವೆ. 243 ಸದಸ್ಯ ಬಲದ ರಾಜ್ಯಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 59 ಮತ್ತು ಬಿಜೆಪಿ 56 ಸದಸ್ಯರನ್ನು ಹೊಂದಿವೆ.







