ಪಡುಮಲೆ ಮೊದಲ ಹಂತದ ಕಾಮಗಾರಿ ಡಿಸೆಂಬರ್‌ನೊಳಗೆ ಮುಗಿಸಲು ಸೂಚನೆ: ಸಚಿವ ರೈ

ಪುತ್ತೂರು, ಜು.4: ತುಳುನಾಡಿನ ಕಾರಣಿಕ ಪುರುಷರೆಂಬ ಐತಿಹಾಸಿಕ ಹಿನ್ನಲೆಯುಳ್ಳ ಕೋಟಿ ಚೆನ್ನಯರ ಹುಟ್ಟೂರಾದ ಪುತ್ತೂರು ತಾಲ್ಲೂಕಿನ ಪಡುಮಲೆ ವ್ಯಾಪ್ತಿಯಲ್ಲಿರುವ ನಾನಾ ಅವಶೇಷಗಳನ್ನು ಅಭಿವೃದ್ಧಿಪಡಿಸಿ, ಪಡುಮಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸುವ ಉದ್ದೇಶದಿಂದ ಮಂಜೂರುಗೊಂಡಿರುವ 5 ಕೋಟಿ ರೂ. ಅನುದಾನದಲ್ಲಿ ಮೊದಲ ಹಂತದ ಕಾಮಗಾರಿಗಳನ್ನು ಡಿಸೆಂಬರ್ ಒಳಗಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ.
ಪುತ್ತೂರು ಮಿನಿ ವಿಧಾನಸೌಧದಲ್ಲಿ ಮಂಗಳವಾರ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಉಪವಿಭಾಗಾಧಿಕಾರಿ ಡಾ.ರಘುನಂದನ ಮೂರ್ತಿ ಅವರ ಜತೆ ಪಡುಮಲೆ ಅಭಿವೃದ್ಧಿಗೆ ಸಂಬಂಧಿಸಿ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರವನ್ನು ತಿಳಿಸಿದರು.
ಅವಳಿ ಪುರುಷರಾದ ಕೋಟಿ ಚೆನ್ನಯರ ಬದುಕಿಗೆ ಸಂಬಂಧಪಟ್ಟ ಐತಿಹ್ಯಗಳು ಪಡುಮಲೆ ಸುತ್ತಮುತ್ತಲು ಹರಡಿಕೊಂಡಿವೆ. ಈಗಾಗಲೇ ಶಂಖಪಾಲ ಬೆಟ್ಟದ ತಪ್ಪಲಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಈ ಕಾಮಗಾರಿಯನ್ನು ತ್ವರಿತವಾಗಿ ನಡೆಸುವಂತೆ ತಿಳಿಸಲಾಗಿದೆ.
ಶಂಖಪಾಲ ಬೆಟ್ಟದ ತುದಿಯಲ್ಲಿ ಧಾರ್ಮಿಕ ಪರಂಪರೆಗೆ ಧಕ್ಕೆಯಾಗದಂತೆ ಕಾಮಗಾರಿ ನಡೆಸಲಾಗುವುದು. ಅಲ್ಲಿ ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ಪ್ರತಿಮೆ ಸ್ಥಾಪಿಸುವ ಮೂಲಕ ಈ ಪ್ರದೇಶವನ್ನು ಪ್ರವಾಸಿ ಕೇಂದ್ರವಾನ್ನಾಗಿಸಲಾಗುವುದು. ಸಮುದಾಯ ಭವನದಿಂದ ಬೆಟ್ಟದ ತುದಿಗೆ ಹೋಗಲು ಅನುಕೂಲವಾಗುವಂತೆ ಸುಂದರ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು ಎಂದರು.
ಕೋಟಿ ಚೆನ್ನಯರ ಮತ್ತು ತಾಯಿ ದೇಯಿ ಬೈದ್ಯೆತಿಯ ಬದುಕಿನ ಪ್ರಮುಖ ಕುರುಹುಗಳಿರುವ ಪ್ರದೇಶಗಳು ಖಾಸಗಿ ಸ್ಥಳದಲ್ಲಿದ್ದು. ಸಂಬಂಧಪಟ್ಟವರು ಆ ಖಾಸಗಿ ಸ್ಥಳಗಳನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟಲ್ಲಿ ಅಲ್ಲಿ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಇದಕ್ಕೆ ಖಾಸಗಿ ಜಮೀನು ಮಾಲೀಕರು ಸಿದ್ಧರಿಲ್ಲ. ಹೀಗಾಗಿ ಅಲ್ಲಿಗೆ ಸರ್ಕಾರದ ದುಡ್ಡು ಕೊಡಲು ಬರುವುದಿಲ್ಲ ಎಂದರು.
ಸರ್ಕಾರದ ವಶದಲ್ಲಿರುವ ಶಂಖಪಾಲ ಬೆಟ್ಟ ಪ್ರದೇಶವನ್ನು ಕೋಟಿ ಚೆನ್ನಯರ ಹೆಸರಿನಲ್ಲಿ ಅತ್ಯುತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲಾಗುವುದು. ಮುಜರಾಯಿ ಇಲಾಖೆಯ ಅಧಿಕಾರಿ ಪ್ರಮೀಳಾ ಅವರಿಗೆ ಈ ಅಭಿವೃದ್ಧಿ ಕಾರ್ಯದ ಉಸ್ತುವಾರಿ ವಹಿಸಲಾಗಿದ್ದು, ಅವರ ಮೂಲಕ ಈ ಕೆಲಸಗಳು ನಡೆಯಲಿವೆ. ಡಿಸೆಂಬರ್ ವೇಳೆಗೆ ಮೊದಲ ಹಂತದ ಕಾಮಗಾರಿಯನ್ನು ಮುಗಿಸುವ ಗುರಿ ಇದೆ .ಇದರೊಂದಿಗೆ ಇದೇ ಪ್ರದೇಶದಲ್ಲಿ ಕೋಟಿ ಚೆನ್ನಯ ಅಧ್ಯಯನ ಕೇಂದ್ರ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ದೇಯಿ ಬೈದ್ಯೆತಿ ಔಷಧ ವನಕ್ಕೆ ಇನ್ನಷ್ಟು ಅನುದಾನ: ಅರಣ್ಯ ಇಲಾಖೆಯ ವತಿಯಿಂದ ಬಡಗನ್ನೂರು ಗ್ರಾಮದ ಮುಡಿಪುನಡ್ಕದಲ್ಲಿ ‘ದೇಯಿ ಬೈದ್ಯೆತಿ’ ಹೆಸರಿನಲ್ಲಿ ಆರಂಭಿಸಲಾಗಿರುವ ಔಷಧೀಯ ವನದಲ್ಲಿ ಈಗಾಗಲೇ ಮೊದಲ ಹಂತದ ಸಸ್ಯ ನಾಟಿ ಮುಗಿದಿದ್ದು, ಔಷಧ ವನ ಸುಂದರ ತಾಣವಾಗಿದೆ. ಆರೂವರೆ ಎಕರೆ ಪ್ರದೇಶ ವ್ಯಾಪ್ತಿಯ ಈ ವನದಲ್ಲಿ ಅರ್ಧದಷ್ಟು ಜಾಗ ಇನ್ನೂ ಖಾಲಿ ಇದೆ. ಅದರಲ್ಲಿ ಪಾದಚಾರಿ ಪಥ, ಸುಂದರ ವನ, ಔಷಧಿ ವನ ಇತ್ಯಾದಿ ನಿರ್ಮಿಸುವ ಉದ್ದೇಶವಿದ್ದು, ಅರಣ್ಯ ಇಲಾಖೆಯಿಂದ ಈ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗಾಗಿ ಇನ್ನಷ್ಟು ಅನುದಾನ ಒದಗಿಸಲಾಗುವುದು ಎಂದರು. ಅಲ್ಲದೆ ಮೈಂದನಡ್ಕ ಪ್ರದೇಶದ ಸಮೀಪವಿರುವ ಐತಿಹಾಸಿಕ ಹಿನ್ನಲೆಯುಳ್ಳ ಪ್ರಾಚೀನ ಕೆರೆಯೊಂದನ್ನು ಅರಣ್ಯ ಇಲಾಖೆಯ ಅನುದಾನದಲ್ಲೇ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ರಮಾನಾಥ ರೈ ಅವರು ತಿಳಿಸಿದರು.
ದೈವಸ್ಥಾದ ಜೀರ್ಣೋದ್ಧಾರಕ್ಕೆ 20 ಲಕ್ಷ ರೂ.:
ಪಡುಮಲೆಯನ್ನು ಪ್ರವಾಸೋದ್ಯಮ ತಾಣವನ್ನಾಗಿಸುವ ಜತೆಯಲ್ಲಿಯೇ ಪಡುಮಲೆಯ ಕಾರಣಿಕ ಕ್ಷೇತ್ರವಾದ ಪೂಮಾಣಿ - ಕಿನ್ನಿಮಾಣಿ (ಉಳ್ಳಾಕುಲು ಕ್ಷೇತ್ರ) ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಈ ಜೀರ್ಣೋದ್ಧಾರಕ್ಕಾಗಿ ಸರ್ಕಾರದಿಂದ 20 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.
ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮಾತನಾಡಿ, ಪಡುಮಲೆ ಪ್ರದೇಶದ ಅಭಿವೃದ್ಧಿಯ ಜತೆಗೆ ಅಲ್ಲಿನ ರಸ್ತೆಗಳ ಅಭಿವೃದ್ಧಿಯೂ ನಡೆಯುತ್ತಿದೆ. ಎರಡನೇ ಹಂತದಲ್ಲಿ ರಸ್ತೆ ಅಭಿವೃದ್ಧಿಗೆ ಇನ್ನಷು್ಟ ಒತ್ತು ನೀಡಲಾಗುವುದು ಎಂದರು.







