ಹನೂರು: ಪ.ಪಂ. ವಾಣಿಜ್ಯ ಮಳಿಗೆಯ ಮುಂಭಾಗ ಹೆಚ್ಚುವರಿ ಸ್ಥಳಾವಕಾಶ ತೆರವು
.jpg)
ಹನೂರು, ಜು.4: ಪಟ್ಟಣದಲ್ಲಿ ಜೆಸಿಬಿ ಕಾರ್ಯಾಚರಣೆ ನಡೆಸಿದ್ದು ಪಟ್ಟಣ ಪಂಚಾಯತ್ ವಾಣಿಜ್ಯ ಮಳಿಗೆಯ ಮುಂಭಾಗ ಬಾಡಿಗೆದಾರರು ಆವರಿಸಿಕೊಂಡಿದ್ದ ಹೆಚ್ಚುವರಿ ಸ್ಥಳಾವಕಾಶವನ್ನು ತೆರವುಗೊಳಿಸಲಾಗಿದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ 34 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಈ ಮಳಿಗೆಗಳನ್ನು ಟೆಂಡರ್ ಮೂಲಕ ಬಹಿರಂಗ ಹರಾಜು ನಡೆಸಿ ಬಾಡಿಗೆಗೆ ನೀಡಲಾಗಿತ್ತು. ಆದರೆ ಬಾಡಿಗೆ ಪಡೆದ ವ್ಯಾಪಾರಿಗಳು ಮಳಿಗೆಯ ಮುಂಭಾಗಕ್ಕೆ ಹೆಚ್ಚುವರಿಯಾಗಿ ಶಿಟುಗಳನ್ನು ಅಳವಡಿಸಿಕೊಂಡು 10-15 ಅಡಿಗಳಷ್ಟು ನಿಲ್ದಾಣವನ್ನು ಆವರಿಸಿಕೊಂಡಿದ್ದರು. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತಿತ್ತು ಮತ್ತು ವಾಹನಗಳನ್ನು ಪಾರ್ಕ್‌ಮಾಡಲು ಅಡಚಣೆಯಾಗುತ್ತಿತ್ತು.
ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆ ಪಟ್ಟಣ ಪಂ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೆಳಗ್ಗೆಯೇ ಕಾರರ್ಯಾಚರನೆ ನಡೆಸಿ ಹೆಚ್ಚುವರಿಯಾಗಿ ಹಾಕಿಕೊಳ್ಳಲಾಗಿದ್ದ ಮಣ್ಣನ್ನು ತೆರವುಗೊಳಿಸಿ, ಮೇಲ್ಚಾವಣಿಗೆ ಅಳವಡಿಸಲಾಗಿರುವ ಶೀಟುಗಳನ್ನೂ ಸಹ ತೆರವುಗೊಳಿಸುವಂತೆ ಸೂಚನೆ ನೀಡಿದರು.
ಜೆಸಿಬಿ ಕಾರ್ಯಾಚರಣೆ ಹಿನ್ನೆಲೆ ವೃತ್ತ ನಿರೀಕ್ಷಕ ಪರಶುರಾಮ್ ಸಮ್ಮುಖದಲ್ಲಿ ಸಿಬ್ಬಂದಿ ನೇಮಕ ಮಾಡಿ ಮೀಸಲು ಪಡೆ ಠಿಕಾಣಿ ಹೂಡಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಕಾರ್ಯಾಚರಣೆ ವೇಳೆ ಮುಖ್ಯಾಧಿಕಾರಿ ಮೋಹನ್ ಕೃಷ್ಣ, ಕರವಸೂಲಿಗಾರ ನಂಜುಂಡಶೆಟ್ಟಿ, ಸಿಬ್ಬಂದಿ ಮನಿಯಾ, ಕೆಂಪರಾಜು, ಪ.ಪಂ ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ರಾಜುಗೌಡ, ರಮೇಶ್‌ನಾಯ್ಡು, ಬಾಲರಾಜ್‌ನಾಯ್ಡು, ನಾಗಣ್ಣ, ಜಯಪ್ರಕಾಶ್‌ಗುಪ್ತ ಇನ್ನಿತರರು ಹಾಜರಿದ್ದರು.
ಬಾಡಿಗೆ ಪಾವತಿಸಿ ಇಲ್ಲದಿದ್ದರೆ ಖಾಲಿಮಾಡಿ: ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆದಿರುವ ಬಾಡಿಗೆದಾರರು ಕಳೆದ 11 ತಿಂಗಳುಗಳಿಂದಲೂ ಬಾಡಿಗೆಗಳನ್ನು ಪಾವತಿಸಿಲ್ಲ. ಇನ್ನು ಕೆಲವು ಬಾಡಿಗೆದಾರರು ಕರಾರು ಪತ್ರವನ್ನೇ ನೋಂದಣಿ ಮಾಡಿಸಿಲ್ಲ. ಅಂತಹ ಬಾಡಿಗೆದಾರರ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಅಂತಹ ಮಳಿಗೆಗಳನ್ನು ಮರು ಹರಾಜಿಗೆ ಒಳಪಡಿಸಲಾಗುವುದು. ಕೆಲ ಬಾಡಿಗೆದಾರರು ಮಳಿಗೆಗಳನ್ನು 3ನೇ ವ್ಯಕ್ತಿಗೆ ಬಾಡಿಗೆಗೆ ನೀಡಿ ಬಾಡಿಗೆ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆದುದರಿಂದ ಬಾಡಿಗೆ ಪಾವತಿ ಮಾಡದ ಬಾಡಿಗೆದಾರರು ಹಣ ಪಾವತಿಸಬೇಕು ಎಂದು ಸೂಚನೆ ನೀಡಿದರು.
ಮುಖ್ಯಾಧಿಕಾರಿ ಕಾರ್ಯವೈಖರಿಗೆ ಮೆಚ್ಚುಗೆ: ಪ.ಪಂ ಮುಖ್ಯಾಧಿಕಾರಿಗಳ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು ಇದೇ ಖಡಕ್ ನಿರ್ಧಾರವನ್ನು ಬಾಡಿಗೆ ವಸೂಲಾತಿಯಲ್ಲಿಯೂ ಕೈಗೊಂಡು ಬಂದ ಆದಾಯದಿಂದ ಪಟ್ಟಣಕ್ಕೆ ಅವಶ್ಯವಾದ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಅಭಿಪ್ರಾಯಟಪಟ್ಟು ಮುಖ್ಯಾಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.







