ಕಡಲ್ಕೊರೆತ ಪ್ರದೇಶದಲ್ಲಿ ಗಾಳಿಮರಗಳ ಮಾರಣಹೋಮಕ್ಕೆ ಯತ್ನ : ಸ್ಥಳೀಯರ ವಿರೋಧ
ಉಳ್ಳಾಲ,ಜು.4: ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ಇತ್ತೀಚೆಗೆ ತೀವ್ರಗೊಂಡಿದ್ದು, ಉಳ್ಳಾಲದ ಸೀಗ್ರೌಂಡ್ ಪ್ರದೇಶದ ಕಡಲ ತೀರದಲ್ಲಿದ್ದ ಒಂದೆರಡು ಗಾಳಿಮರಗಳು ಉರುಳಿ ಬಿದ್ದಿತ್ತು. ಇದನ್ನು ಕಡಿಯಲು ಅರಣ್ಯ ಇಲಾಖೆ ಮರಕಡಿಯುವವರಿಗೆ ಗುತ್ತಿಗೆ ನೀಡಿತ್ತು.ಆದರೆ ಕಾರ್ಮಿಕರು ಮಾತ್ರ ಸತ್ತ ಮರವನ್ನು ಬಿಟ್ಟು ಸಜೀವ ಮರಗಳನ್ನು ಕಡಿದು ಹಾಕಿದ್ದು ಇದಕ್ಕೆ ಸ್ಥಳೀಯರು ತೀವ್ರ ಪ್ರತಿರೋಧ ತೋರಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಅರಣ್ಯ ಉಪವಲಯಾಧಿಕಾರಿ ಮರಗಳನ್ನು ಕಡಿಯದಂತೆ ಕಾರ್ಮಿಕರಿಗೆ ಆದೇಶ ನೀಡಿದ್ದಾರೆ.
ಉಳ್ಳಾಲದ ಸೀಗ್ರೌಂಡ್‍ನ ಕಡಲ ತೀರದಲ್ಲಿ ಮಂಗಳವಾರ ಬೆಳಿಗ್ಗೆಯೇ ಸುಮಾರು 8 ಮಂದಿ ಮರಕಡಿಯುವ ಕೂಲಿ ಕಾರ್ಮಿಕರು ಯಂತ್ರಗಳ ಸಹಾಯದಿಂದ ಮೂರು ಸಜೀವ ಗಾಳಿ ಮರಗಳನ್ನು ಕಡಿದು ಉರುಳಿಸಿದ್ದರು. ಇದನ್ನು ಕಂಡ ಸ್ಥಳೀಯ ನಿವಾಸಿಗಳಾದ ರಂಜಿತ್, ದಯಾನಂದ್ ಅವರು ತಮ್ಮ ಸಂಗಡಿಗರೊಂದಿಗೆ ಸೇರಿ ಮರಕಡಿಯುವವರಲ್ಲಿ ಪ್ರಶ್ನಿಸಿ ತಡೆಯೊಡಿದ್ದರು. ಇದಕ್ಕೆ ಪ್ರತಿಯಾಗಿ ಕಾರ್ಮಿಕರು ನಮಗೆ ಅರಣ್ಯ ಇಲಾಖಾ ಆದೇಶವಿದೆ ಹಾಗಾಗಿ ತೀರದಲ್ಲಿರುವ ಎಲ್ಲಾ ಮರಗಳನ್ನು ಕಡಿಯಲಾಗುವುದೆಂದು ಉತ್ತರಿಸಿದ್ದು ಅರಣ್ಯ ಉಪವಲಯಾಧಿಕಾರಿ ರವಿಕುಮಾರ್ ಅವರ ಮೊಬೈಲ್ ನಂಬರನ್ನು ಸ್ಥಳೀಯರಿಗೆ ನೀಡಿದ್ದಾರೆ.
ನಂತರ ಸ್ಥಳಕ್ಕೆ ಬಂದ ಅಧಿಕಾರಿ ರವಿಕುಮಾರ್ ಅವರನ್ನು ಸ್ಥಳೀಯರು ಆರಂಭದಲ್ಲಿ ತರಾಟೆಗೆ ತೆಗೆದಿದ್ದು ಮರಗಳನ್ನು ಕಡಿಯುವ ಅನಿವಾರ್ಯತೆ ಏನೆಂದು ಪ್ರಶ್ನಿಸಿದ್ದಾರೆ. ಸಮುದ್ರದಲೆಗೆ ಕೊಚ್ಚಿ ಕೊಂಡು ಹೋಗಿರುವ ಮರಗಳನ್ನು ಮಾತ್ರ ಕಡಿಯಲು ಇಲಾಖೆ ಆದೇಶಿಸಿದೆ ಹೊರತು ಸಜೀವ ಮರಗಳನ್ನು ಕಡಿಯುವಂತಿಲ್ಲ ಎಂದು ಉಪವಲಯಾಧಿಕಾರಿ ರವಿಕುಮಾರ್ ಅವರು ಹೇಳಿದ್ದಾರೆ. ಸ್ಥಳೀಯರ ಕಾಳಜಿಯಿಂದ ಮರಗಳ ಮಾರಣಹೋಮ ತಪ್ಪಿದಂತಾಗಿದೆ.





.jpg.jpg)



