ಅಚಲ ಕುಮಾರ ಜ್ಯೋತಿ ಮುಂದಿನ ಮುಖ್ಯ ಚುನಾವಣಾ ಆಯುಕ್ತ

ಹೊಸದಿಲ್ಲಿ,ಜು.4: ಚುನಾವಣಾ ಆಯುಕ್ತ ಅಚಲ ಕುಮಾರ ಜ್ಯೋತಿ (65) ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ)ರನ್ನಾಗಿ ಮಂಗಳವಾರ ನೇಮಕಗೊಳಿ ಸಲಾಗಿದೆ. ಹಾಲಿ ಸಿಇಸಿ ನಸೀಂ ಝೈದಿ ಅವರು ಬುಧವಾರ, ಜು.6ರಂದು ನಿವೃತ್ತ ರಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಜ್ಯೋತಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದರು.
ಜ್ಯೋತಿ ಅವರು ಜು.6ರಂದು ಸಿಇಸಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾನೂನು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
2013,ಜನವರಿಯಲ್ಲಿ ಗುಜರಾತ್ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತ ರಾಗಿದ್ದ 1975ರ ತಂಡದ ಐಎಎಸ್ ಅಧಿಕಾರಿಯಾಗಿರುವ ಜ್ಯೋತಿ 2015,ಮೇ 8 ರಂದು ಚುನಾವಣಾ ಆಯುಕ್ತರಾಗಿ ಚುನಾವಣಾ ಆಯೋಗಕ್ಕೆ ಸೇರ್ಪಡೆಗೊಂಡಿದ್ದು, ಮುಂದಿನ ವರ್ಷದ ಜ.17ರವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಅಥವಾ ಚುನಾವಣಾ ಆಯುಕ್ತರು ಆರು ವರ್ಷಗಳ ಅಧಿಕಾರಾವಧಿ ಅಥವಾ 65 ವರ್ಷ ಪ್ರಾಯ....ಈ ಪೈಕಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ.
ದೇಶದ 21ನೇ ಸಿಇಸಿ ಆಗಲಿರುವ ಜ್ಯೋತಿ ಗುಜರಾತ್ ಜಾಗ್ರತ ಆಯುಕ್ತ, ಕಾಂಡ್ಲಾ ಬಂದರು ಮಂಡಳಿ ಅಧ್ಯಕ್ಷ, ಸರ್ದಾರ್ ಸರೋವರ ನರ್ಮದಾ ನಿಗಮದ ಆಡಳಿತ ನಿರ್ದೇಶಕ ಸೇರಿದಂತೆ ರಾಜ್ಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ರಾಜ್ಯದ ಕೈಗಾರಿಕೆ, ಕಂದಾಯ ಮತ್ತು ನೀರು ಪೂರೈಕೆ ಇಲಾಖೆಗಳ ಕಾರ್ಯದರ್ಶಿಯೂ ಆಗಿದ್ದರು.
ಸರಕಾರವು ಝೈದಿಯವರ ನಿರ್ಗಮನದಿಂದ ತೆರವುಗೊಳ್ಳುತ್ತಿರುವ ಸ್ಥಾನಕ್ಕೆ ಇನ್ನೋರ್ವ ಚುನಾವಣಾ ಆಯುಕ್ತರನ್ನು ಶೀಘ್ರವೇ ನೇಮಕಗೊಳಿಸುವ ನಿರೀಕ್ಷೆಯಿದೆ. ಓಂ ಪ್ರಕಾಶ ರಾವತ್ ಇನ್ನೋರ್ವ ಚುನಾವಣಾ ಆಯುಕ್ತರಾಗಿದ್ದಾರೆ.







