ಬಾಕಿ ಹಣ ಪಾವತಿಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಮಂಡ್ಯ, ಜು.4: ಜಿಲ್ಲೆಯ ರೈತರು 2016-17ನೆ ಸಾಲಿನಲ್ಲಿ ಸರಬರಾಜು ಮಾಡಿದ ಕಬ್ಬಿನ ಬಾಕಿ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದ (ಮೂಲ ಸಂಘಟನೆ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಕಾರ್ಯಕರ್ತರು ನಂತರ, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿದರು. ಜಿಲ್ಲಾಡಳಿತ, ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಾಲಿನ ಟನ್ ಕಬ್ಬಿಗೆ ನಿಗದಿಪಡಿಸಲಾಗಿದ್ದ 2,300 ರೂ.ಗಳನ್ನು ರೈತರಿಗೆ ಇನ್ನೂ ನೀಡಿಲ್ಲ. ಈ ಹಣವನ್ನು ಕೂಡಲೇ ಪಾವತಿಸಬೇಕು. ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ 200 ರೂ.ಗಳ ಎಸ್‌ಎಪಿ ಬೆಲೆ ನಿಗದಿಮಾಡಿದ್ದು, ಸದರಿ ಹಣವನ್ನು ಕಾರ್ಖಾನೆಗಳು ಪಾವತಿಸಲು ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಸತತ ನಾಲ್ಕು ವರ್ಷಗಳಿಂದ ಬರಗಾಲ ಬೆನ್ನತ್ತಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲ, ಕೆರೆಕಟ್ಟೆಗಳು ಒಣಗಿವೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ರಾಜ್ಯ ಸರಕಾರ ನೀರು ಹರಿಸುತ್ತಿದ್ದು, ಕೂಡಲೇ ನೀರು ನಿಲುಗಡೆ ಮಾಡಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಅವರು ಆಗ್ರಹಿಸಿದರು.
ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಕಳೆದ ಆರು ತಿಂಗಳಿನಿಂದ ಬಿಡುಗಡೆ ಮಾಡಿಲ್ಲವೆಂದು ಕಿಡಿಕಾರಿದ ಪ್ರತಿಭಟನಾಕಾರರು, ಕೂಡಲೇ ಲೀಟರ್‌ಗೆ 5 ರೂ.ಗಳ ಪ್ರೋತ್ಸಾಹ ಧನದ ಜತೆಗೆ ರೇಷ್ಮೆ ಗೂಡಿನ ಪ್ರೋತ್ಸಾಹಧನವನ್ನೂ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಸುಧೀರ್‌ಕುಮಾರ್, ಶ್ರೀಧರ್, ರಾಮಲಿಂಗಯ್ಯ, ಪ್ರಕಾಶ್, ರಮೇಶ್, ನಾಗೇಂದ್ರಸ್ವಾಮಿ, ಚಂದ್ರಶೇಖರ, ನಗರಕೆರೆ ಶ್ರೀಧರ್, ರಾಮಲಿಂಗಯ್ಯ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







