ಪುಲ್ವಾಮ ಎನ್‌ಕೌಂಟರ್ : ಮೂರನೇ ಉಗ್ರನ ಹತ್ಯೆ

ಶ್ರೀನಗರ, ಜು.4: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದ್ದು , ಮತ್ತೋರ್ವ ಉಗ್ರನನ್ನು ಹತ್ಯೆ ಮಾಡಿವೆ. ಇದರೊಂದಿಗೆ ಎನ್‌ಕೌಂಟರ್‌ಗೆ ಬಲಿಯಾದ ಉಗ್ರರ ಸಂಖ್ಯೆ 3ಕ್ಕೇರಿದೆ.
ಪುಲ್ವಾಮ ಜಿಲ್ಲೆಯ ಬಹ್ನೂ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಬಗ್ಗೆ ದೊರೆತ ಮಾಹಿತಿಯನ್ವಯ ಭದ್ರತಾ ಪಡೆಗಳು ಸೋಮವಾರ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ವಿರುದ್ಧ ಗುಂಡಿನ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಪಡೆಗಳ ನೆರವಿನೊಂದಿಗೆ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸೋಮವಾರ ಭದ್ರತಾ ಪಡೆಗಳ ಗುಂಡಿಗೆ ಇಬ್ಬರು ಉಗ್ರರು ಬಲಿಯಾಗಿದ್ದರೆ ಮಂಗಳವಾರ ಮತ್ತೊಬ್ಬ ಉಗ್ರ ಬಲಿಯಾಗಿದ್ದಾನೆ. ಎನ್‌ಕೌಂಟರ್ ಸಂದರ್ಭ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





