ಜಿಎಸ್‌ಟಿ ಎಫೆಕ್ಟ್: ಎಲ್‌ಪಿಜಿ ಬೆಲೆ ತೀವ್ರ ಏರಿಕೆ

ಹೊಸದಿಲ್ಲಿ,ಜು.4: ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಗೃಹಬಳಕೆ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 32 ರೂ.ವರೆಗೆ ಹೆಚ್ಚಿಸಲಾಗಿದೆ. ಇದು ಕಳೆದ ಆರು ವರ್ಷಗಳಲ್ಲಿ ಸಬ್ಸಿಡಿ ಎಲ್‌ಪಿಜಿ ಬೆಲೆಯಲ್ಲಿನ ಅತ್ಯಂತ ಹೆಚ್ಚಿನ ಏರಿಕೆಯಾಗಿದೆ. ರಾಜಧಾನಿ ದಿಲ್ಲಿಯಲ್ಲಿ 446.65 ರೂ.ಗಳಿದ್ದ 14.2 ಕೆ.ಜಿ.ಯ ಸಿಲಿಂಡರ್ ಬೆಲೆ ಈಗ 477.46 ರೂ.ಆಗಿದೆ.
ಪ್ರತ್ಯೇಕ ಫ್ಯಾಕ್ಟರಿ ಗೇಟ್ ಸುಂಕ ಮತ್ತು ಮಾರಾಟ ತೆರಿಗೆಯನ್ನು ಆಕರಿಸಲಾಗುತ್ತಿದ್ದ ಹಿಂದಿನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ದೇಶಾದ್ಯಂತ ಅಡುಗೆ ಅನಿಲಕ್ಕೆ ಅಬಕಾರಿ ಸುಂಕವನ್ನು ವಿಧಿಸುತ್ತಿರಲಿಲ್ಲ.
ಚಂಡಿಗಡ, ಹರ್ಯಾಣ, ಜಮ್ಮು-ಕಾಶ್ಮೀರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಎಲ್‌ಪಿಜಿ ಮಾರಾಟ ತೆರಿಗೆಯಿಂದ ಮುಕ್ತವಾಗಿತ್ತು. ಇತರ ರಾಜ್ಯಗಳಲ್ಲಿ ಮಾರಾಟ ತೆರಿಗೆಯ ಪ್ರಮಾಣ ಶೇ.1ರಿಂದ ಶೇ.5ರಷ್ಟಿತ್ತು.
ಆದರೆ ಡಝನ್ನಿಗೂ ಅಧಿಕ ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಅಂತರ್ಗತವಾಗಿರುವ ಜಿಎಸ್‌ಟಿಯಡಿ ಸಬ್ಸಿಡಿ ಎಲ್‌ಪಿಜಿಯ ಮೇಲೆ ಶೇ.5ರಷ್ಟು ತೆರಿಗೆಯನ್ನು ಹೇರಲಾಗಿದೆ. ಅಂದರೆ ಈವರೆಗೆ ವ್ಯಾಟ್ ಪ್ರಮಾಣ ಶೂನ್ಯ ಅಥವಾ ಶೇ.5ಕ್ಕಿಂತ ಕಡಿಮೆಯಿದ್ದ ರಾಜ್ಯಗಳಲ್ಲಿ ಬೆಲೆಗಳು ಏರಿಕೆಯಾಗಿವೆ.
ನಿಗದಿತ ವಾರ್ಷಿಕ 12 ಸಬ್ಸಿಡಿ ಸಿಲಿಂಡರ್‌ಗಳ ಮಿತಿಯ ಬಳಿಕ ಗ್ರಾಹಕ ಬಳಸುವ ಸಬ್ಸಿಡಿ ರಹಿತ ಎಲ್‌ಪಿಜಿಗೆ ಜಿಎಸ್‌ಟಿಯಡಿ ಶೇ.18 ತೆರಿಗೆ ವಿಧಿಸಲಾಗಿದ್ದು,ದಿಲ್ಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 11.5 ರೂ.ಏರಿಕೆಯಾಗಿ 564 ರೂ.ಆಗಿದೆ.
ಜಾಗತಿಕ ತೈಲ ಬೆಲೆಗಳಲ್ಲಿ ಏರಿಕೆಯಿಂದಾಗಿ 2011,ಜೂನ್ 25ರಂದು ಗೃಹಬಳಕೆ ಎಲ್‌ಪಿಜಿಯ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂ.ಹೆಚ್ಚಿಸಲಾಗಿತ್ತು. ಅಲ್ಲಿಂದೀಚಿಗೆ ಈಗಿನ ಏರಿಕೆಯೇ ಅತ್ಯಂತ ಹೆಚ್ಚಿನದಾಗಿದೆ.







