1890ರ ಒಪ್ಪಂದಕ್ಕೆ ನೆಹರು ಅನುಮೋದನೆ ನೀಡಿಲ್ಲ
ಚೀನಾ ಪ್ರಧಾನಿಗೆ ಭಾರತದ ಪ್ರಥಮ ಪ್ರಧಾನಿ ಬರೆದ ಪತ್ರದಲ್ಲಿ ಬಹಿರಂಗ

ಬೀಜಿಂಗ್, ಜು. 4: ಟಿಬೆಟ್ ಮತ್ತು ಸಿಕ್ಕಿಂ ಗಡಿಗಳಿಗೆ ಸಂಬಂಧಿಸಿ ಬ್ರಿಟಿಶ್ ಭಾರತ ಮತ್ತು ಚೀನಾಗಳ ನಡುವೆ ಏರ್ಪಟ್ಟ 1890ರ ಒಪ್ಪಂದವನ್ನು, ಚೀನಾ ಹೇಳಿಕೊಳ್ಳುವಂತೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಸಂಪೂರ್ಣವಾಗಿ ಅನುಮೋದಿಸಿಲ್ಲ.
ಭಾರತದ ಪ್ರಥಮ ಪ್ರಧಾನಿ ಬರೆದ ಪತ್ರಗಳೇ ಇದನ್ನು ಹೇಳುತ್ತವೆ.
ಭಾರತ, ಭೂತಾನ್ ಮತ್ತು ಚೀನಾಗಳ ಗಡಿಗಳು ಪರಸ್ಪರ ಸಂಧಿಸುವ ಸ್ಥಳದ ಬಗ್ಗೆ ಭಾರತ ಮತ್ತು ಚೀನಾಗಳ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಇರುವುದು, 1959ರಲ್ಲಿ ನೆಹರು ಅಂದಿನ ಚೀನಾ ಪ್ರಧಾನಿ ಝೂ ಎನ್‌ಲಾಯಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಇಂದು ಇದೇ ಪ್ರದೇಶ ಭಾರತ ಮತ್ತು ಚೀನಾಗಳ ನಡುವೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ.
ಸಿಕ್ಕಿಂಗೆ ಸಂಬಂಧಿಸಿ ಭಾರತ ಮತ್ತು ಚೀನಾಗಳ ನಡುವೆ 1890ರಲ್ಲಿ ಏರ್ಪಟ ಗಡಿ ಒಪ್ಪಂದವನ್ನು ನೆಹರು ಅನುಮೋದಿಸಿದ್ದಾರೆ ಎಂಬುದಾಗಿ ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಸೋಮವಾರ, ನೆಹರು 1959 ಮಾರ್ಚ್ 22ರಂದು ಎನ್‌ಲಾಯಿಗೆ ಬರೆದ ಪತ್ರವನ್ನು ಉಲ್ಲೇಖಿಸಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಸಿಕ್ಕಿಂ ಮತ್ತು ಟಿಬೆಟ್‌ಗಳಿಗೆ ಸಂಬಂಧಿಸಿ ಗ್ರೇಟ್ ಬ್ರಿಟನ್ ಮತ್ತು ಚೀನಾಗಳ ನಡುವೆ ಏರ್ಪಟ್ಟ ಒಪ್ಪಂದಕ್ಕೆ 1890ರಲ್ಲಿ ಅಂದಿನ ಕಲ್ಕತ್ತದಲ್ಲಿ ಅಂದಿನ ವಸಾಹತುಶಾಹಿ ಬ್ರಿಟನ್ ಮತ್ತು ಚೀನಾದ ಕಿಂಗ್ ರಾಜವಂಶ ಸಹಿ ಹಾಕಿತ್ತು.
‘‘ಚೀನಾ-ಸಿಕ್ಕಿಂ ಗಡಿಯಲ್ಲಿ ಯಾವುದೇ ವಿವಾದವಿಲ್ಲ ಎಂಬುದಾಗಿ 1959 ಸೆಪ್ಟಂಬರ್ 26ರಂದು ಝೂ ಅವರಿಗೆ ಬರೆದ ಪತ್ರದಲ್ಲಿ ನೆಹರು ಖಚಿತಪಡಿಸಿದ್ದಾರೆ ಎಂದು ಆ ಒಪ್ಪಂದ ಮತ್ತು ಇನ್ನೊಂದು ಪತ್ರವನ್ನು ಉಲ್ಲೇಖಿಸಿ ಚೀನಾದ ವಕ್ತಾರ ಹೇಳಿದ್ದರು.
ಆದರೆ, ವಾಸ್ತವವಾಗಿ ಸೆಪ್ಟಂಬರ್ 26ರಂದು ನೆಹರು ಬರೆದ ಪತ್ರದಲ್ಲಿ, ಚೀನಾ ಈಗ ಜಗತ್ತಿಗೆ ಹೇಳುತ್ತಿರುವುದಕ್ಕಿಂತ ಹೆಚ್ಚಿನ ವಿಷಯಗಳಿವೆ. ಉತ್ತರ ಸಿಕ್ಕಿಂಗೆ ಸಂಬಂಧಪಟ್ಟಂತೆ ಮಾತ್ರ 1890ರ ಒಪ್ಪಂದಕ್ಕೆ ಭಾರತ ಬದ್ಧವಾಗಿದೆ ಎಂದು ಆ ಪತ್ರದಲ್ಲಿ ನೆಹರು ಹೇಳಿದ್ದಾರೆ.
‘‘1890ರ ಒಪ್ಪಂದವು ಸಿಕ್ಕಿಂ ಮತ್ತು ಟಿಬೆಟ್ ನಡುವಿನ ಗಡಿಯನ್ನೂ ಗುರುತಿಸಿದೆ. ಹಾಗೂ ಈ ಗಡಿಯನ್ನು ಬಳಿಕ 1895ರಲ್ಲಿ ಜಾರಿಗೆ ತರಲಾಯಿತು. ಸಿಕ್ಕಿಂ ಮತ್ತು ಟಿಬೆಟ್ ವಲಯಕ್ಕೆ ಸಂಬಂಧಿಸಿದ ಗಡಿಯಲ್ಲಿ ಯಾವುದೇ ವಿವಾದವಿಲ್ಲ. ಇದು ಸ್ಪಷ್ಟವಾಗಿ ಉತ್ತರ ಸಿಕ್ಕಿಂಗೆ ಅನ್ವಯಿಸುತ್ತದೆಯೇ ಹೊರತು ಮೂರು ದೇಶಗಳ ಗಡಿಗಳು ಸಂಧಿಸುವ ಪ್ರದೇಶಕ್ಕಲ್ಲ. ಈ ತ್ರಿದೇಶ-ಗಡಿ ಸಂಧಿ ಬಗ್ಗೆ ಸಿಕ್ಕಿಂ ಮತ್ತು ಭೂತಾನ್ ಜೊತೆ ಚರ್ಚಿಸಬೇಕಾದ ಅಗತ್ಯವಿದೆ. ಹಾಗೂ ಈಗ ಅದು ವಿವಾದಾಸ್ಪದ ಪ್ರದೇಶವಾಗಿದೆ. ಅದೇ ವೇಳೆ, 1890ರ ಒಪ್ಪಂದವು ಅಸಮಾನತೆಯ ಒಪ್ಪಂದ ಎಂಬುದನ್ನು ನಾವು ಮರೆಯದಿರೋಣ. ಯಾಕೆಂದರೆ ಅದರಲ್ಲಿ ಟಿಬೆಟ್, ಸಿಕ್ಕಿಂ ಮತ್ತು ಭೂತಾನ್ ಒಳಗೊಂಡಿಲ್ಲ’’ ಎಂದು ಚೀನಾ ಪ್ರಧಾನಿ ಝೂಗೆ ಬರೆದ ಪತ್ರದಲ್ಲಿ ನೆಹರು ಹೇಳಿದ್ದರು.
ಯುದ್ಧದಲ್ಲಿ ಭಾರತ ಮೇಲುಗೈ ಪಡೆಯುವುದಿಲ್ಲ: ಚೀನಾ ಸೇನಾ ವೆಬ್‌ಸೈಟ್
ಸಿಕ್ಕಿಂ ವಲಯದಲ್ಲಿ ಈಗ ಉಂಟಾಗಿರುವ ಬಿಕ್ಕಟ್ಟು, ಭಾರತ ಮತ್ತು ಚೀನಾಗಳ ನಡುವೆ ‘ಸಶಸ್ತ್ರ ಸಂಘರ್ಷ’ವಾಗಿ ಮಾರ್ಪಟ್ಟರೆ, ಭಾರತದ ಸಶಸ್ತ್ರ ಪಡೆಗಳು ಮೇಲುಗೈ ಪಡೆಯುವುದಿಲ್ಲ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಬ್‌ಸೈಟ್‌ನಲ್ಲಿ ಮಂಗಳವಾರ ಪ್ರಕಟಗೊಂಡ ಲೇಖನವೊಂದು ಎಚ್ಚರಿಸಿದೆ.
ಯುದ್ಧ ವಿಶ್ಲೇಷಕ ವಾಂಗ್ ದೇಹುಬ ಬರೆದಿರುವ ಲೇಖನವು, ಇದೇ ವಲಯದಲ್ಲಿ 1967ರಲ್ಲಿ ನಡೆದ ಸಂಘರ್ಷವನ್ನು ನೆನಪಿಸಿದೆ ಹಾಗೂ ಅಂದು ಭಾರತೀಯ ಪಡೆಗಳ ವಿರುದ್ಧ ಚೀನಾ ಸೇನೆಯು ‘ಎರಡು ವಿನಾಶಕಾರಿ’ ಪ್ರತಿ ದಾಳಿಗಳನ್ನು ನಡೆಸಿತು ಎಂದು ಹೇಳಿದೆ.







