ಮಾದರಿ ಗ್ರಾಮಗಳಲ್ಲಿ ವಿದ್ಯುತ್ ಕ್ರಾಂತಿ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.4: ಪ್ರತಿ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರದ 5 ಮಾದರಿ ಗ್ರಾಮಗಳಲ್ಲಿ ವಿದ್ಯುತ್ ಸೋರಿಕೆ ತಡೆಗಟ್ಟುವುದು, ತ್ರೀ ಫೇಸ್ ವಿತರಣಾ ಮಾರ್ಗ, ದಿನಪೂರ್ತಿ ವಿದ್ಯುತ್ ಸರಬರಾಜು ಸೇರಿದಂತೆ ಹಲವು ಉಪಯುಕ್ತ ಯೋಜನೆಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕೆಪಿಟಿಸಿಎಲ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ಮಾದರಿ ಗ್ರಾಮಗಳಲ್ಲಿ ವಿದ್ಯುತ್ ಕ್ರಾಂತಿ ಮಾಡುವ ನಿಟ್ಟಿನಲ್ಲಿ 25ಲಕ್ಷ ರೂ.ನಿಂದ 40ಲಕ್ಷ ರೂ.ಖರ್ಚು ಮಾಡಲಾಗುವುದು ಎಂದು ತಿಳಿಸಿದರು.
ಮಾದರಿ ಗ್ರಾಮಗಳಲ್ಲಿ ಬೀದಿ ದೀಪಗಳಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಿ ‘ಟೈಮರ್ ಸ್ವಿಚ್’ ಅಳವಡಿಸಲಾಗುವುದು. ಇದರಿಂದ ಸಂಜೆ 6ಗಂಟೆಗೆ ತನ್ನಷ್ಟಕ್ಕೆ ಬೀದಿ ದೀಪ ಹತ್ತಿಕೊಂಡು ಬೆಳಗ್ಗೆ 7ಕ್ಕೆ ನಂದುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಾಕಷ್ಟು ವಿದ್ಯುತ್ತನ್ನು ಉಳಿಸಬಹುದಾಗಿದೆ. ಹಾಗೆಯೇ ವಿದ್ಯುತ್ ಹೊರಗನುಗುಣವಾಗಿ ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಮಾದರಿ ಉಪ ವಿಭಾಗಗಳು: ಮಾದರಿ ಗ್ರಾಮಗಳ ರೀತಿಯಲ್ಲಿಯೇ 3675ಕೋಟಿ ರೂ.ಯೋಜನೆಯಡಿಯಲ್ಲಿ 5 ಮಾದರಿ ಉಪ ವಿಭಾಗಗಳನ್ನು ರೂಪಿಸಲಾಗಿದೆ. ಬೆಸ್ಕಾಂಗೆ 1850ರೂ., ಹೆಸ್ಕಾಂಗೆ 515ಕೋಟಿ ರೂ., ಜೆಸ್ಕಾಂ 315ಕೋಟಿ ರೂ., ಮೆಸ್ಕಾಂ 350ಕೋಟಿ ರೂ.ವಿನಿಯೋಗಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಮಾದರಿ ಉಪವಿಭಾಗಗಳಲ್ಲಿ ನಿರಂತರ ಗುಣಮಟ್ಟದ ವಿದ್ಯುತ್ ಸರಬರಾಜು. ತಾಂತ್ರಿಕ ಹಾಗೂ ವಾಣಿಜ್ಯ ವಿದ್ಯುತ್ ಸೋರಿಕೆಯನ್ನು ತಗ್ಗಿಸುವುದು ಹಾಗೂ ಶೇ.100ರಷ್ಟು ಬಿಲ್ಲಿಂಗ್ ಹಾಗೂ ವಸೂಲಾತಿ ಮಾಡುವ ಮೂಲಕ ಗ್ರಾಹಕ ಸ್ನೇಹಿ ಹಾಗೂ ವಿದ್ಯುತ್ ನಿಗಮಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಲಾಗುವುದು ಎಂದು ಅವರು ಹೇಳಿದರು.
50ಸಾವಿರ ಟ್ರಾನ್ಸ್‌ಫಾರ್ಮರ್: ರಾಜ್ಯದ ಪ್ರತಿ ತಾಲೂಕಿನಲ್ಲೂ ಕನಿಷ್ಠ 100ಟ್ರಾನ್ಸ್‌ಫಾರ್ಮರ್‌ಗಳು ಹೆಚ್ಚುವರಿಯಾಗಿ ಇರುವಂತೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ 5ಸಾವಿರ ಟ್ರಾನ್ಸ್‌ಫಾರ್ಮರ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಟ್ರಾನ್ಸ್‌ಫಾರ್ಮರ್ ಹಾಳಾದ ಮೂರು ದಿನದಲ್ಲಿ ಬದಲಾಯಿಸಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸ್ಮಾರ್ಟ್ ಮೀಟರ್ ಅಳವಡಿಕೆ: ವಿದ್ಯುತ್ ಸರಬರಾಜು ಹಾಗೂ ಬಳಕೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಹಂತ, ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೆ ಮೈಸೂರ್ ಜಿಲ್ಲೆಯ ಕೆಲವೆಡೆ ಪ್ರಾಯೋಗಿಕವಾಗಿ ಸ್ಮಾರ್ಟ್ ಮೀಟರ್ ಅಳವಡಿಸಿ ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದರು.







