ಅಸ್ಸಾಂ: ಜಾನುವಾರು ಸಾಗಾಟಗಾರರಿಗೆ ಹಲ್ಲೆ ನಡೆಸಿದ್ದ ಐವರು ಗೋರಕ್ಷಕರ ಸೆರೆ

ಗುವಾಹಟಿ,ಜು.4: ರವಿವಾರ ಇಲ್ಲಿಗೆ ಸಮೀಪದ ಸೋನಾಪುರದಲ್ಲಿ ಅಧಿಕೃತ ದಾಖಲೆಗಳಿದ್ದರೂ ಮೂರು ಜಾನುವಾರು ಸಾಗಾಟದ ವಾಹನಗಳ ಚಾಲಕರ ಮೇಲೆ ಹಲ್ಲೆ ನಡೆಸಿದ್ದ ಮೂಲಭೂತವಾದಿ ಹಿಂದು ಗುಂಪೊಂದರ ಐವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದು ಯುವ ಛಾತ್ರ ಪರಿಷದ್‌ಗೆ ಸೇರಿದ ಸ್ವಘೋಷಿತ ಗೋರಕ್ಷಕರನ್ನು ಸೋಮವಾರ ರಾತ್ರಿ ಸೋನಾಪುರ ಸಮೀಪದ ಗ್ರಾಮಗಳಿಂದ ಬಂಧಿಸಲಾಗಿದೆ. ಆರಂಭದಲ್ಲಿ ಹಲ್ಲೆ ಘಟನೆಯನ್ನು ನಿರಾಕರಿಸಿದ್ದ ಪೊಲೀಸರು, ಈ ಸಂಬಂಧ ಯಾರೂ ದೂರು ದಾಖಲಿಸಿಲ್ಲ ಎಂದು ಹೇಳಿದ್ದರು.
ಚಾಲಕರು ಜಾನುವಾರು ಸಾಗಾಟಕ್ಕೆ ಅಗತ್ಯ ದಾಖಲೆಗಳನ್ನು ಹೊಂದಿದ್ದರಾದರೂ ಕೆಲವು ಅಕ್ರಮಗಳು ಕಂಡುಬಂದಿದ್ದವು. ಹೀಗಾಗಿ ಪೊಲೀಸರು ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಭಾರವನ್ನು ಹೇರಲಾಗಿತ್ತೇ ಎನ್ನುವುದನ್ನು ಪರಿಶೀಲಿಸಲು ಅವುಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಿದ್ದಾರೆ.
ಅಸ್ಸಾಮಿನಲ್ಲಿ ಗೋರಕ್ಷಕರ ದಾಂಧಲೆಯ ಮೊದಲ ಪ್ರಕರಣ ಎ.30ರಂದು ವರದಿಯಾಗಿತ್ತು. ಅಂದು ನಾಗಾಂವ್ ಜಿಲ್ಲೆಯಲ್ಲಿ ಗುಂಪೊಂದು ಜಾನುವಾರು ಕಳ್ಳತನದ ಆರೋಪದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳನ್ನು ಕೊಂದುಹಾಕಿತ್ತು.
ಎ.6ರಂದು ರಾಜ್ಯದ ಜೋರ್ಹಾಟ್‌ನಲ್ಲಿ ಮಾರುಕಟ್ಟೆಯಿಂದ ಗೋಮಾಂಸವನ್ನು ಸ್ವಂತ ಬಳಕೆಗಾಗಿ ಖರೀದಿಸಿ ಸಾಗಿಸುತ್ತಿದ್ದ ಓರ್ವ ಬಾಲಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು.





