ಬಿಲ್ಲವ ಸಮಾಜಕ್ಕೆ ಸಚಿವ ರೈ ಕೊಡುಗೆ ಅಪಾರ : ಬಿಲ್ಲವ ಮುಖಂಡರು
’’ಪೂಜಾರಿ ಸಮಾಜದ ಪ್ರಶ್ನಾತೀತ ನಾಯಕ”

ಬಂಟ್ವಾಳ, ಜು. 4: ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕ. ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವಹೇಳನ ಮಾಡಿದ್ದಾರೆಂಬ ಆರೋಪಕ್ಕೆ ಯಾವುದೇ ಹುರುಳಿಲ್ಲ. ಈ ವಿವಾದದಿಂದ ಬಿಲ್ಲವ ಸಮಾಜ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
ಮಂಗಳವಾರ ಸಂಜೆ ಮೆಲ್ಕಾರ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಬಿಲ್ಲವ ಸಮುದಾಯಕ್ಕೆ ಸಚಿವ ರಮಾನಾಥ ರೈ ಕೊಡುಗೆಯೂ ಅಪಾರ. ಸರಕಾರದ ವತಿಯಿಂದಲೇ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಆಚರಣೆಗೆ, ಜನಾರ್ದನ ಪೂಜಾರಿಯವರ ಜೊತೆಗೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿ ಕಾರ್ಯಗತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿ.ಸಿ.ರೋಡಿನ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣಗೊಳಿಸುವಲ್ಲಿ ಸಚಿವ ರೈ ಶ್ರಮವಿದೆ. ಸಜಿಪದ ಜ್ಞಾನ ಮಂದಿರ ಸೇರಿದಂತೆ ವಿವಿಧ ನಾರಾಯಣ ಗುರು ಮಂದಿರ ಹಾಗೂ ಸಮುದಾಯಭವನ ನಿರ್ಮಾಣಕ್ಕೆ ಸರಕಾರದ ಅನುದಾನವನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದ ಅವರು, ಸಚಿವ ರೈಯವರಲ್ಲಿ ಬಿಲ್ಲವ ಸಮುದಾಯದ ಋಣವಿದೆ ಎಂದು ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಮಾತನಾಡಿ, ಜನಾರ್ದನ ಪೂಜಾರಿ ಉಭಯ ಜಿಲ್ಲೆಯ ಅಭಿವೃದ್ಧಿ ಹಾಗೂ ಸಮುದಾಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಹಾಗೆಯೇ ಅವರ ಮೇಲೆ ನಮ್ಮ ಸಮುದಾಯಕ್ಕೆ ವಿಶೇಷವಾದ ಗೌರವವಿದೆ. ಸಚಿವ ರಮಾನಾಥ ರೈ ಈಗಾಗಲೇ ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿ ನಮ್ಮಲ್ಲಿದ್ದ ಗೊಂದಲ ನಿವಾರಿಸಿದ್ದಾರೆ. ಹಾಗಾಗಿ ಬಿಲ್ಲವ ಸಮಾಜದ ಯಾರೊಬ್ಬರೂ ಈ ವಿಚಾರದಲ್ಲಿ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ವಿವಾದದ ಹಿನ್ನೆಲೆಯಲ್ಲಿ ನಾವ್ಯಾರೂ ಕೂಡ ಇದುವರೆಗೆ ಜನಾರ್ದನ ಪೂಜಾರಿಯವರನ್ನು ಖುದ್ದು ಭೇಟಿ ಮಾಡಿಲ್ಲ. ಅವರ ವಿರುದ್ಧ ಅವಹೇಳನಕಾರಿಯಾಗಿ ಸಚಿವ ರೈ ಮಾತನಾಡಿದ್ದಾರೆ ಎಂಬ ಆರೋಪ ಇದ್ದ ಹಿನ್ನಲೆಯಲ್ಲಿ ಸಂಘದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಖಂಡನಾ ನಿರ್ಣಯ ಕೈಗೊಂಡಿದ್ದದ್ದು ಹೌದು. ಆದರೆ ಸಚಿವ ರೈ ಇಂತಹಾ ಘಟನೆ ನಡೆದಿಲ್ಲ ಎಂಬ ಸ್ಪಷ್ಟಣೆ ನೀಡಿದ್ದರಿಂದ ಸಮುದಾಯದಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಈ ಹೇಳಿಕೆ ನೀಡುತ್ತಿರುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯುದ್ದಕ್ಕೂ ವಿವಾದವೆಬ್ಬಿಸಿದ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳರ ಹೆಸರನ್ನು ಪ್ರಸ್ತಾಪಿಸದೆ ಮಾತನಾಡಿದ ಬಂಟ್ವಾಳ ತಾಲೂಕಿನ ಬಿಲ್ಲವ ಮುಖಂಡರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ವಿವಾದದ ಕುರಿತಾಗಿ ಸಚಿವರ ರೈಯವರನ್ನು ಪ್ರಮಾಣಕ್ಕೆ ಕರೆದಿದ್ದಲ್ಲಿ ಅದನ್ನು ಅವರವರೇ ನೋಡಿಕೊಳ್ಳುತ್ತಾರೆ ಎಂದು ಸಮಜಾಯಿಷಿ ನೀಡಿದರು. ಸಚಿವ ರೈ ಯವರನ್ನು ಬೆಂಬಲಿಸುವ ಭರದಲ್ಲಿ ನಿಮ್ಮ ಮುಖಂಡರನ್ನು ಕೈ ಬಿಡುತ್ತೀರಾ ಎಂಬ ಪ್ರಶ್ನೆಗೆ, ಎಲ್ಲರೂ ನಮ್ಮವರೇ. ಯಾರನ್ನೂ ಕೈ ಬಿಡುವುದಿಲ್ಲ. ನಮ್ಮ ಸಮಾಜದ ಎಲ್ಲರೂ ಒಂದಾಗಿದ್ದೇವೆ ಮತ್ತು ಇತರ ಸಮಾಜವರನ್ನು ನಮ್ಮವರಂತೆ ಪ್ರೀತಿಸುತ್ತಿದ್ದೇವೆ ಎಂದರು.
ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಅಕ್ರಮಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಶಿವ ಪ್ರಸಾದ್, ಪುರಸಭಾ ಸದಸ್ಯರಾದ ವಾಸುಪೂಜಾರಿ, ಗಂಗಾಧರ್, ಪ್ರಮುಖರಾಧ ಭುವನೇಶ್ ಪಚ್ಚಿನಡ್ಕ, ಸಂತೋಷ್ ಕೊಟ್ಟಿಂಜ, ರಾಜೇಶ್ ಸುವರ್ಣ, ವಿಶ್ವನಾಥ್ ಬಿ, ಗಣೇಶ್ ಪೂಜಾರಿ, ಶ್ರೀಧರ ಅಮೀನ್, ಕೇಶವ ಪೂಜಾರಿ, ಸುರೇಶ್ ಪೂಜಾರಿ, ಸತೀಶ್, ಗಿರೀಶ್, ಶಿವಪ್ಪ ಪೂಜಾರಿ, ಶಂಕರ ಪೂಜಾರಿ, ಪ್ರವೀಣ್ ಪೂಜಾರಿ, ಭೋಜಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







