ರಾಜ್ಯಪಾಲರಿಂದ ಬೆದರಿಕೆ,ಅವಮಾನ: ಮಮತಾ ಆರೋಪ

ಕೋಲ್ಕತಾ,ಜು.4: ಅಭೂತಪೂರ್ವ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ರಾಜ್ಯಪಾಲ ಕೇಸರಿನಾಥ ತ್ರಿಪಾಠಿಯವರು ತನಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮಂಗಳವಾರ ಆರೋಪಿಸಿದರು. ರಾಜ್ಯಪಾಲರು ಬಿಜೆಪಿ ಬ್ಲಾಕ್ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ ಎಂದೂ ಅವರು ಹೇಳಿದರು.
ರಾಜ್ಯ ಸಚಿವಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ, ಅವರು (ರಾಜ್ಯಪಾಲರು) ತನಗೆ ದೂರವಾಣಿಯಲ್ಲಿ ಬೆದರಿಕೆಯನ್ನೊಡ್ಡಿದ್ದಾರೆ. ಅವರು ಬಿಜೆಪಿ ಯನ್ನು ವಹಿಸಿಕೊಂಡು ಮಾತನಾಡಿದ ರೀತಿಯಿಂದ ತನಗೆ ಅವಮಾನವಾಗಿದೆ. ಅವರು ಹಾಗೆ ಮಾತನಾಡಬಾರದು ಎಂದು ತಾನು ಹೇಳಿದ್ದೇನೆ ಎಂದರು.
ರಾಜ್ಯಪಾಲರು ಬಿಜೆಪಿ ಬ್ಲಾಕ್ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ. ತನ್ನನ್ನು ಹುದ್ದೆಗೆ ನಾಮಕರಣ ಮಾಡಲಾಗಿದೆ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದ ಅವರು, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅವರು ದೊಡ್ಡದಾಗಿ ಮಾತನಾಡಿದ್ದಾರೆ. ಯಾರ ದಯೆಯಿಂದಲೂ ತಾನು ಈ ಹುದ್ದೆಯಲ್ಲಿಲ್ಲ. ಅವರು ತನ್ನೊಂದಿಗೆ ಮಾತನಾಡಿದ ರೀತಿ ಯಿಂದ ಕುರ್ಚಿಯಿಂದ ಇಳಿಯುವ ಬಗ್ಗೆಯೂ ತಾನು ಯೋಚಿಸಿದ್ದೆ ಎಂದರು.





