ಜು.5 : ಮಿಸ್ಚೀಫ್ ಹಾಸ್ಪಿಟಾಲಿಟಿ ಪ್ರೈ. ಲಿ. ನಿಂದ 3 ಹೊಸ ಆಹಾರ ಮಳಿಗೆಗಳ ಉದ್ಘಾಟನೆ

ಮಂಗಳೂರು, ಜು.4: ಮಿಸ್ಚೀಫ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮುಂಬೈ ಸ್ಟ್ರೀಟ್ ಕಿಚನ್, ಬಾಂಬೆ ಬಾದ್‌ಶಾ ಮತ್ತು ಭಂಡಾರೀಸ್ ಪಂಜಾಬಿ ಘಸೀಟ್‌ರಾಂ ಬಾಂಬೈವಾಲ ಎಂಬ ಮೂರು ಆಹಾರ ಮಳಿಗೆಗಳನ್ನು ಮಂಗಳೂರಿನ ಜನತೆಗೆ ಪರಿಚಯಿಸಲಿದೆ.
ಈ ಮೂರೂ ಆಹಾರ ಮಳಿಗೆಗಳು ನಗರದ ಕೆ.ಎಸ್. ರಾವ್ ರಸ್ತೆ ಹಾಗೂ ಶರವು ದೇವಸ್ಥಾನ ರಸ್ತೆಯ ಸಮೀಪವಿರುವ ಎಕ್ಸೆಲ್ ಮಿಸ್ಚೀಫ್ ಮಾಲ್‌ನಲ್ಲಿ ಜು.5ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು, ಮೂರು ಮಳಿಗೆಗಳ ಅತ್ಯುತ್ತಮ ಖಾದ್ಯಗಳನ್ನು ಒಂದೇ ಸೂರಿನಡಿ ಸವಿಯುವ ಅವಕಾಶವನ್ನು ಸಂಸ್ಥೆಯು ಗ್ರಾಹಕರಿಗೆ ಒದಗಿಸಲಿದೆ ಎಂದು ಮಂಗಳೂರಿನ ಪಂಜಾಬ್ ದಾ ಪಿಂಡ್ ರೆಸ್ಟೋರೆಂಟ್ ಹಾಗೂ ಕುಸುಮಾ ಭಂಡಾರಿ ಕನ್ಸ್‌ಟ್ರಕ್ಷನ್ ಪ್ರೈ.ಲಿ. ಇದರ ಪ್ರವರ್ತಕ ಸುರೇಶ್ ಭಂಡಾರಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಿಸ್ಚೀಫ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಇದರ ಮುಖ್ಯಸ್ಥೆಯಾಗಿರುವ ಕುಸುಮಾ ಭಂಡಾರಿ ಅವರು ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ರಿಚಲ್ ಭಂಡಾರಿ ಭಾಗವಹಿಸಲಿದ್ದಾರೆ.
ಈ ಮೂರು ಆಹಾರ ಮಳಿಗೆಗಳು ಮುಂಬೈಯ ಜನಪ್ರಿಯ ಸ್ಟ್ರೀಟ್ ಸ್ನ್ಯಾಕ್ ಗಳಿಂದ ಹಿಡಿದು ಸಿಹಿ ತಿಂಡಿಗಳು ಹಾಗೂ ತಾಜಾ ಪೇಯಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಮಹಾನಗರಿಯ ಸ್ವಾದಿಷ್ಟ ಸವಿರುಚಿಗಳನ್ನು ಮಂಗಳೂರಿಗೆ ಪ್ರಪ್ರಥಮ ಬಾರಿಗೆ ಪರಿಚಯಿಸಲಿವೆ. ಆಕರ್ಷಕ ಪರಿಸರ ಹಾಗೂ ಮುಂಬೈ ಮಹಾನಗರಿಯ ವಾತಾವರಣ ಮೂಡಿಸುವಂತೆ ಸುಂದರವಾಗಿ ವಿನ್ಯಾಸಗೊಳಿಸಲ್ಪಟ್ಟಿವೆ ಈ ಹವಾನಿಯಂತ್ರಿತ ರೆಸ್ಟಾರೆಂಟುಗಳು. ತಜ್ಞ ಪಾಕ ಪ್ರವೀಣರನ್ನೊಳಗೊಂಡ ಹಾಗೂ ಅತ್ಯುತ್ತಮ ತರಬೇತಿ ಪಡೆದ ತಂಡಗಳು ಗ್ರಾಹಕರಿಗೆ ವಿಶ್ವದರ್ಜೆ ಆಹಾರವನ್ನು ಉಣಬಡಿಸಲಿವೆ. ಮುಂಬೈ ಸ್ಟ್ರೀಟ್ ಕಿಚನ್ ಹಾಗೂ ಬಾಂಬೆ ಬಾದ್‌ಶಾ ವಾರದ ಎಲ್ಲಾ ಏಳು ದಿನಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 11ರ ತನಕ ತೆರೆದಿರುತ್ತದೆ ಎಂದರು.
►ಮುಂಬೈ ಸ್ಟ್ರೀಟ್ ಕಿಚನ್: ಇದೊಂದು ಶಾಖಾಹಾರಿ ರೆಸ್ಟಾರೆಂಟ್ ಆಗಿದ್ದು ಸಾಂಪ್ರದಾಯಿಕ ಮುಂಬೈ ಸ್ಟ್ರೀಟ್ ಸ್ನ್ಯಾಕ್ಸ್‌ಗಳಾದ ವಡಾ ಪಾವ್, ಮಿಸಲ್ ಪಾವ್, ಸಾಬುದಾನ ವಡ; ಚಾಟ್ ಐಟಂಗಳಾದ ಪಾನಿ ಪುರಿ, ಕಚೋರಿ ಹಾಗೂ ಬಟೂರೆ ಇಲ್ಲಿ ಲಭ್ಯ ಇವೆ. ಮುಂಬೈ ಶೈಲಿಯ ದಕ್ಷಿಣ ಭಾರತೀಯ ಭಕ್ಷ್ಯಗಳು ವಿವಿಧ ರೀತಿಯ ದೋಸಾಗಳು, ಇಡ್ಲಿ -ವಡಾ, ಶೀರಾ ಮತ್ತು ಉಪ್ಮಾಗಳು ಮೆನುವಿನ ಒಂದು ಭಾಗವಾಗಿದೆ. ಆಧುನಿಕ ಫಾಸ್ಟ್ ಫುಡ್ ಐಟಂಗಳಾದ ರೋಲ್ಸ್, ಸ್ಯಾಂಡ್ ವಿಚ್, ಬರ್ಗರ್ ಇಲ್ಲಿ ಲಭ್ಯ ಇವೆ.
►ಬಾಂಬೆ ಬಾದ್‌ಶಾ: ಇದು ತಂಪು ಪಾನೀಯಗಳ ಪಾರ್ಲರ್ ಆಗಿದ್ದು, ಗ್ರಾಹಕರ ಬಾಯಾರಿಕೆ ನೀಗಿಸುವಂತಹ ತಾಜಾ ಹಣ್ಣಿನ ಜ್ಯೂಸ್, ಫಲೂಡಾ, ತಾಜಾ ಕ್ರೀಮ್, ಶೇಕ್ ಹಾಗೂ ಮಾಕ್ ಟೈಲ್‌ಗಳು ಇಲ್ಲಿ ಲಭ್ಯವಿವೆ.
►ಭಂಡಾರೀಸ್ ಪಂಜಾಬಿ ಘಸೀಟ್‌ರಾಂ ಬಾಂಬೈವಾಲ: ಇದು ವಿಶೇಷ ಸಿಹಿತಿಂಡಿಗಳ ಲೌಂಜ್ ಆಗಿದ್ದು ವಿಶ್ವವಿಖ್ಯಾತ ಮುಂಬೈ ಶೈಲಿಯ ಸವಿರುಚಿಗಳು ಇಲ್ಲಿ ಲಭ್ಯವಿವೆ. ಪಂಜಾಬಿ ಮತ್ತು ಉತ್ತರ ಭಾರತೀಯ ಸಾಂಪ್ರದಾಯಿಕ ಸಿಹಿತಿಂಡಿಗಳು, ಶುದ್ಧ ಹಾಲು ಹಾಗೂ ತುಪ್ಪದಿಂದ ತಯಾರಿಸಲ್ಪಟ್ಟ ಸ್ವಾದಿಷ್ಟ ಲಡ್ಡು, ಪೇಡಾ, ಹಲ್ವ ಹೊರತಾಗಿ ಒಣ ಹಣ್ಣುಗಳು ಮತ್ತು ವಿವಿಧ ನಮ್ಕೀನ್‌ಗಳು ಕೂಡ ಇಲ್ಲಿ ದೊರೆಯಲಿವೆ ಎಂದವರು ಮಾಹಿತಿ ನೀಡಿದರು.
ಭಂಡಾರೀಸ್ ಪಂಜಾಬಿ ಘಸೀಟ್‌ರಾಂ ಬಾಂಬೈವಾಲ ಸ್ವೀಟ್ ಸೆಂಟರ್ ಕೂಡ ಸದ್ಯದಲ್ಲಿಯೇ ಬಾಗಿಲು ತೆರೆಯಲಿದೆ. ಮುಂಬೈಯ ಸ್ವಾದಿಷ್ಟ ತಿನಿಸುಗಳೆಂದರೆ ಮಂಗಳೂರಿಗರಿಗೆ ಅಚ್ಚುಮೆಚ್ಚು. ಮಂಗಳೂರಿನ ಆಹಾರ ಪ್ರಿಯರಿಗೆಂದೇ ಶೇ.100 ಮುಂಬೈ ಮಾದರಿಯ ಆಹಾರ ಮಳಿಗೆಗಳನ್ನು ಪ್ರಪ್ರಥಮವಾಗಿ ತೆರೆಯುವ ಪ್ರಯತ್ನ ನಮ್ಮದಾಗಿದೆ. ಶುದ್ಧ, ಸ್ವಾದಿಷ್ಟ, ಉತ್ತಮ ಗುಣಮಟ್ಟದ ಹಾಗೂ ವೈವಿಧ್ಯಮಯ ಸರುಚಿಗಳೇ ನಮ್ಮ ಯಶಸ್ಸಿನ ಸೂತ್ರವಾಗಿದೆ ಸುರೇಶ್ ಭಂಡಾರಿ ತಿಳಿಸಿದರು.







