ಸಂಗೀತದಿಂದ ಉತ್ತಮ ಆರೋಗ್ಯ: ಲೋಹಿತ್

ಹೆಬ್ರಿ, ಜು.4: ಮಕ್ಕಳನ್ನು ಕೇವಲ ಅಂಕ ಗಳಿಕೆಯ ವಸ್ತುವನ್ನಾಗಿಸದೆ ಸಂಗೀತ, ಚಿತ್ರಕಲೆ, ನೃತ್ಯ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಅವರ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು. ನಿರಂತರ ಸಂಗೀತದಲ್ಲಿ ತೊಡಗಿಸಿ ಕೊಂಡಾಗ ಉತ್ತಮ ಆರೋಗ್ಯ ಭಾಗ್ಯ ನಮ್ಮದಾಗುತ್ತದೆ ಎಂದು ಹೆಬ್ರಿ ವಲಯ ಅರಣ್ಯ ಅಧಿಕಾರಿ ಲೋಹಿತ್ ಹೇಳಿದ್ದಾರೆ.
ಹೆಬ್ರಿ ಶ್ರೀರಾಮ್ ಟವರ್‌ನಲ್ಲಿರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿ ನಲ್ಲಿ ಆರಂಭಗೊಂಡ ಸಂಗೀತ ನಮ್ಮದು ಧ್ವನಿ ನಿಮ್ಮದು ಕಾರ್ಯಕ್ರಮದಡಿಯಲ್ಲಿ ಟ್ರ್ಯಾಕ್ ಹಾಡುಗಳಿಗೆ ಧ್ವನಿ ಸೇರಿಸಿ ಹಾಡುವ ವಿಶೇಷ ಸಂಗೀತ ತರಗತಿಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಶಸ್ತಿ ಪುರಸ್ಕೃತ ಗಾಯಕ ಮುಟ್ಲಪಾಡಿ ಉದಯ ಶೆಟ್ಟಿ ಮಾತನಾಡಿ, ಮಕ್ಕಳ ಪ್ರತಿಭೆಗಳು ಆರಂಭದಲ್ಲಿಯೇ ಗುರುತಿಸಲು ಸಾಧ್ಯವಿಲ್ಲ. ನಿರಂತರ ಪ್ರಯತ್ನ ಹಾಗೂ ತರಬೇತಿಯ ಮೂಲಕ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಸಂಗೀತ ಹಾಗೂ ಇತರ ಯಾವುದೇ ಕ್ಷೇತ್ರಗಳಲ್ಲಿ ತರಬೇತಿಗೆ ಕಳುಹಿಸಿದರೆ ಅರ್ಧಕ್ಕೆ ಮಾತ್ರ ನಿಲ್ಲಿಸಬೇಡಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಗೀತ ತರಬೇತುದಾರ ಉದಯ್ ಅಜೆಕಾರು, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕಲಾವಿದ ಪುನಿತ್ ಎಸ್. ಮೈಸೂರು, ಪ್ರಕಾಶ್ ಶೆಟ್ಟಿ ಕಲ್ಲಿಲ್ಲು, ಸುನೀತಾ ಅರುಣ್ ಹೆಗ್ಡೆ ಉಪ ಸ್ಥಿತರಿದ್ದರು. ಚಾಣಕ್ಯ ಇನ್ಸಿಟ್ಯೂಟ್ ಆಫ್ ಮ್ಯೂಸಿಕ್ಸ್‌ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಮ್ಯ ಕಾಪೋಳಿ ವಂದಿಸಿದರು.