ಇಸ್ರೇಲ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ
70 ವರ್ಷಗಳಲ್ಲಿ ಟೆಲ್ ಅವೀವ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ

ಟೆಲ್ ಅವೀವ್ (ಇಸ್ರೇಲ್), ಜು. 4: ಇಸ್ರೇಲ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಜಧಾನಿ ಟೆಲ್ ಅವೀವ್ ತಲುಪಿದರು.
ಮೋದಿ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಭಾರತದ ಪ್ರಥಮ ಪ್ರಧಾನಿಯಾಗಿದ್ದಾರೆ.
ಟೆಲ್ ಅವೀವ್ ವಿಮಾನ ನಿಲ್ದಾಣದಲ್ಲಿ ಮೋದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೆಂಪು ಹಾಸಿನ ಸ್ವಾಗತ ಕೋರಿದರು.
ವಿಮಾನ ನಿಲ್ದಾಣದಲ್ಲಿ ಇಬ್ಬರೂ ನಾಯಕರು ಕಿರು ಮಾತುಕತೆ ನಡೆಸಿದರು.
ಪ್ರಧಾನಿ ಮೋದಿಯನ್ನು ಇಸ್ರೇಲ್ ಪ್ರಧಾನಿ ಹಿಂದಿಯಲ್ಲಿ ಸ್ವಾಗತಿಸಿದರು. ‘‘ಆಪ್ ಕಾ ಸ್ವಾಗತ್ ಹೆ ಮೇರೇ ದೋಸ್ತ್’’ ಎಂದರು. ಬಳಿಕ, ‘‘ಈ ಭೇಟಿಗಾಗಿ ನಾವು 70 ವರ್ಷಗಳಿಂದ ಕಾಯುತ್ತಿದ್ದೇವೆ’’ ಎಂದರು.
‘‘ನಮ್ಮ ಮೊದಲ ಭೇಟಿಯಲ್ಲಿ ನೀವು ಏನು ಹೇಳಿದ್ದೀರಿ ಎನ್ನುವುದು ನನಗೆ ನೆನಪಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧಗಳ ವಿಷಯದಲ್ಲಿ ‘ಆಕಾಶವೇ ಮಿತಿ’ ಎಂದು ಹೇಳಿದ್ದೀರಿ. ಆದರೆ, ಪ್ರಧಾನಿಯವರೇ, ಇಂದು ನಾನು ಅದನ್ನು ವಿಸ್ತರಿಸಲಿದ್ದೇನೆ. ನಾವು ಬಾಹ್ಯಾಕಾಶ ಕ್ಷೇತ್ರದಲ್ಲೂ ಸಹಕಾರ ಹೊಂದಿದ್ದೇವೆ. ಹಾಗಾಗಿ, ಭಾರತ ಮತ್ತು ಇಸ್ರೇಲ್‌ಗಳಿಗೆ ಆಕಾಶ ಮಿತಿಯಲ್ಲ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಮೇಕ್ ವಿದ್ ಇಂಡಿಯಾ’ ಜೊತೆಯಾಗಿವೆ’’ ಎಂದು ನೆತನ್ಯಾಹು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಇಸ್ರೇಲ್‌ಗೆ ಈ ಮಹತ್ವದ ಭೇಟಿಯನ್ನು ಕೈಗೊಂಡಿರುವ ಮೊದಲ ಭಾರತೀಯ ಪ್ರಧಾನಿ ನಾನಾಗಿರುವುದಕ್ಕೆ ನಾನು ಸಂತೋಷಪಡುತ್ತೇನೆ ಎಂದರು.
‘‘ಭಯೋತ್ಪಾದನೆಯೆಂಬ ಸಮಾನ ಬೆದರಿಕೆಯ ವಿರುದ್ಧ ನಾವು ನಮ್ಮ ಸಮಾಜಗಳನ್ನು ಸುಭದ್ರಗೊಳಿಸಬೇಕು’’ ಎಂದರು.
‘‘ಇಸ್ರೇಲ್‌ನಲ್ಲಿರುವ ಭಾರತೀಯ ಜನತೆಯೊಂದಿಗೆ ಬೆರೆಯಲು ನಾನು ಉತ್ಸುಕನಾಗಿದ್ದೇನೆ. ಇದರಲ್ಲಿ ಎರಡೂ ದೇಶಗಳನ್ನು ಸಮೃದ್ಧಗೊಳಿಸಿದ ಯಹೂದಿಗಳೂ ಇದ್ದಾರೆ’’ ಎಂದು ಮೋದಿ ಹೇಳಿದರು.
ಇದು ನಮ್ಮ ಜನತೆ ಮತ್ತು ನಮ್ಮ ಸಮಾಜಕ್ಕಾಗಿ ನಾವು ಜೊತೆಯಾಗಿ ಕೈಗೊಳ್ಳುತ್ತಿರುವ ರೋಮಾಂಚಕ ಪ್ರಯಾಣವಾಗಿದೆ ಎಂದರು.







