‘ವೈದ್ಯಕೀಯವನ್ನು ಗ್ರಾಹಕರ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಿ’ : ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು

ಉಡುಪಿ, ಜು.4: ಇಂದು ರೋಗಿಗಳ ಕಡೆಯವರಿಂದ ವೈದ್ಯರ ಮೇಲೆ ಹೊಡೆತ-ಬಡಿತ, ಆಸ್ಪತ್ರೆಗಳ ಮೇಲೆ ದಾಳಿಯಂಥ ಸಮಸ್ಯೆಗಳಿಗೆ ಮೂಲ ಕಾರಣ ವೈದ್ಯಕೀಯ ಸೇವೆಯಂತಹ ಶ್ರೇಷ್ಠ ಮಾನವೀಯ ಸೇವೆಯನ್ನು ಗ್ರಾಹಕರ ಕಾನೂನು ವ್ಯಾಪ್ತಿಗೆ ತಂದದ್ದು. ಒಮ್ಮೆ ಅದನ್ನು ಗ್ರಾಹಕರ ಕಾನೂನು ವ್ಯಾಪ್ತಿಯಿಂದ ಹೊರತಂದು ನೋಡಿ, ವೈದ್ಯರು ಭಯ-ಹೆದರಿಕೆ ಬಿಟ್ಟು ಎಷ್ಟು ಸಾಧ್ಯವೋ ಅಷ್ಟು ರಿಸ್ಕ್ ತೆಗೆದುಕೊಂಡು ಸೇವೆ ಸಲ್ಲಿಸುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಕರಾವಳಿ ವಿಭಾಗದ ಸಂಯೋಜಕ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಘಟಕದ ವತಿಯಿಂದ ವೈದ್ಯರ ದಿನಾಚರಣೆಯ ಅಂಗವಾಗಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ನಡೆದ ‘ಡಾಕ್ಟರ್ಸ್ ಡೇ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ರಾಜಕಾರಣಿಗಳು ಹಾಗು ರಾಜಕೀಯ ಪಕ್ಷಗಳು ವೈದ್ಯರುಗಳ ಸಾಮಾಜಿಕ ಬದ್ಧತೆ ಹಾಗು ಸಂಘಟನಾ ಸಾಮರ್ಥ್ಯವನ್ನ ಕಡೆಗಣಿಸಬಾರದು. ವೈದ್ಯರು ಕೊಲೆಗಡುಕರು, ಲೂಟಿಕೋರರು, ಸುಲಿಗೆ ಮಾಡುವವರು ಎಂಬ ಗುಲ್ಲೆಬ್ಬಿಸಿ ಪವಿತ್ರವಾದ ವೈದ್ಯ-ರೋಗಿಗಳ ನಡುವಿನ ಸಂಬಂಧವನ್ನ ಹಾಳು ಮಾಡಲು ರಾಜಕಾರಣಿಗಳು ಪ್ರಯತ್ನಿಸಬಾರದು ಎಂದವರು ಹೇಳಿದರು.
ಉಡುಪಿ, ಮಣಿಪಾಲದ ಹಿರಿಯ ವೈದ್ಯರುಗಳಾದ ಡಾ.ಶ್ರೀಧರಹೊಳ್ಳ, ಡಾ.ಜಯಗೌರಿ, ಡಾ.ರವೀಂದ್ರ ಕೆ. ಇವರನ್ನು ಡಾ.ಬಿ.ಸಿ. ರಾಯ್ ಹೆಸರಿನಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಇದೇ ವೇಳೆ ವೈದ್ಯಕೀಯ ಸಂಘಟನೆ ನಾಯಕತ್ವ ಹಾಗು ಸಲ್ಲಿಸಿದ ಸೇವೆಗಾಗಿ ಡಾ.ಎಂ. ಅಣ್ಣಯ್ಯ ಕುಲಾಲ್‌ರನ್ನು ಸಹ ಸನ್ಮಾನಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಡಾ.ಮಧುಸೂದನ್, ಡಾ.ಪಾಟೀಲ್, ಡಾ. ವೆಂಕಟೇಶ್,ಡಾ.ಸುದರ್ಶನ್ ರಾವ್ ಉಪಸ್ಥಿತರಿದ್ದರು.







