ಕಳವು ಆರೋಪಿಯ ಬಂಧನ: ಎರಡು ಬೈಕ್ ವಶ
ಮಣಿಪಾಲ, ಜು.4: ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಮಣಿಪಾಲ ಪೊಲೀಸರು ಮಣಿಪಾಲ ಇಂಡಸ್ಟ್ರೀಯಲ್ ಏರಿಯಾದಲ್ಲಿ ಬಂಧಿಸಿದ್ದಾರೆ.
ಉಡುಪಿ ಕುಂಜಿಬೆಟ್ಟುವಿನ ವಿಠಲ ನಾಯ್ಕ ಎಂಬವರ ಪುತ್ರ ಗುರುರಾಜ ನಾಯ್ಕ (30) ಎಂಬಾತ ಬಂಧಿತ ಆರೋಪಿ. ಮಣಿಪಾಲ ಪೊಲೀಸರು ಇಂಡಸ್ಟ್ರೀಯಲ್ ಏರಿಯಾದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಹೊಂಡಾ ಆ್ಯಕ್ಟಿವ್ ದ್ವಿಚಕ್ರ ವಾಹನದಲ್ಲಿ ಸರಿಯಾದ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ಗುರುರಾಜ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರೆನ್ನಲಾಗಿದೆ.
ವಿಚಾರಣೆ ವೇಳೆ ಈತ ಮಣಿಪಾಲ ಅನಂತನಗರದ ಹುಡ್ಕೊ ಕಾಲನಿಯ ಮನೆಯಿಂದ ಹೊಂಡಾ ಆ್ಯಕ್ಟಿವ್, ಈಶ್ವರನಗರದ ಮನೆಯಿಂದ ಬೈಕ್ ಮತ್ತು ಮಣ್ಣಪಳ್ಳ ಬಳಿಯ ಮನೆಯಿಂದ ಕಿಟಕಿ ಮೂಲಕ ಪರ್ಸ್, ನಗದು ಕಳವು ಮಾಡಿರುವುದು ಬಹಿರಂಗ ಪಡಿಸಿದ್ದಾನೆ. ಅದರಂತೆ ಈತನಿಂದ ಕಳವು ಮಾಡಿದ ಎರಡು ದ್ವಿಚಕ್ರವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಈತ ಈ ಹಿಂದೆ ಜೈಲು ಶಿಕ್ಷೆಗೆ ಗುರಿಪಟ್ಟ ಆರೋಪಿಯಾಗಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.







