ಗೋರಕ್ಷಣೆ ಹೆಸರಲ್ಲಿ ಅಮಾಯಕರ ಹತ್ಯೆ ಹಿಂದುತ್ವಕ್ಕೆ ವಿರುದ್ಧವಾದುದು: ಶಿವಸೇನೆ

ಮುಂಬೈ, ಜು. 4: ಗೋರಕ್ಷಣೆ ಹೆಸರಲ್ಲಿ ಅಮಾಯಕರ ಹತ್ಯೆ ನಡೆಸುವುದು ಹಿಂದುತ್ವಕ್ಕೆ ವಿರುದ್ಧವಾದುದು. ಪ್ರಧಾನಿ ನರೇಂದ್ರ ಮೋದಿ ಅವರು ಗೋಮಾಂಸ ಕುರಿತು ರಾಷ್ಟ್ರೀಯ ನೀತಿ ಜಾರಿಗೊಳಿಸಬೇಕು ಎಂದು ಶಿವಸೇನೆ ಹೇಳಿದೆ.
ಬಿಜೆಪಿ ಆಡಳಿತವಿರುವ ಜಾರ್ಖಂಡ್, ಹರ್ಯಾಣ ಹಾಗೂ ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೋರಕ್ಷಣೆ ಹೆಸರಲ್ಲಿ ಥಳಿಸಿ ಹತ್ಯೆ ಹಾಗೂ ಅದನ್ನು ವಿರೋಧಿಸಿ ನಡೆದಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾದ ಸಂಪಾದಕೀಯದಲ್ಲಿ ಈ ಹೇಳಿಕೆ ನೀಡಿದೆ.
ಗೋಮಾಂಸ ವಿಚಾರ ಆಹಾರ ಪದ್ಧತಿ, ವ್ಯವಹಾರ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ್ದು. ಇದುವರೆಗೆ ಗೋವುಗಳನ್ನು ರಕ್ಷಿಸುತ್ತಿದ್ದವರು ಹಿಂದುಗಳು. ಆದರೆ, ಅವರು ಇಂದು ಕೊಲೆಗಾರರಾಗುತ್ತಿದ್ದಾರೆ ಎಂದು ಅದು ಹೇಳಿದೆ.
ಗೋರಕ್ಷಣೆ ಹತ್ಯೆ ನಡೆಯುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸ್ವಾಗತಿಸುತ್ತೇವೆ. ಗೋರಕ್ಷಣೆ ಹೆಸರಲ್ಲಿ ಯಾರೊಬ್ಬರಿಗೂ ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಗೋರಕ್ಷಣೆ ಹೆಸರಲ್ಲಿ ಜನರನ್ನು ಹತ್ಯೆಗೈಯುವುದು ಹಿಂದುತ್ವಕ್ಕೆ ವಿರುದ್ಧವಾದುದು ಎಂದು ಅದು ಹೇಳಿದೆ.
ಹಿಂದುತ್ವವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರುವ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸುತ್ತೇವೆ. ಗೋಮಾಂಸದ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆಯುತ್ತಿರುವುದರಿಂದ ಪ್ರಧಾನಿ ಅವರು ರಾಷ್ಟ್ರೀಯ ನೀತಿಯನ್ನು ಜಾರಿಗೆ ತರಬೇಕು ಎಂದು ಅದು ಹೇಳಿದೆ.





