'ಆ ಎರಡು ವರ್ಷಗಳು' ಆಡಿಯೊ ಬಿಡುಗಡೆ

ಜನಪ್ರಿಯ ಧಾರಾವಾಹಿಗಳ ಮೂಲಕ ಗುರುತಿಸಲ್ಪಟ್ಟ ನಿರ್ದೇಶಕ ಬಿ ಮಧುಸೂದನ್. ಅವರು ನಿರ್ದೇಶಿಸಿರುವ ಪ್ರಥಮ ಚಿತ್ರ ಹೆಸರು 'ಆ ಎರಡು ವರ್ಷಗಳು' ಚಿತ್ರದ ಆಡಿಯೊ ಬಿಡುಗಡೆಯನ್ನು ನಾದಬ್ರಹ್ಮ ಹಂಸಲೇಖ ನಿರ್ವಹಿಸಿದರು.
"ಅನೂಪ್ ನನ್ನ ಅಸಿಸ್ಟೆಂಟ್ ಸ್ಥಾನದಿಂದ ಬಿಡುಗಡೆಯಾಗಿದ್ದಕ್ಕೆ ಇಂದು ಆತನ ಸಿಡಿ ಬಿಡುಗಡೆಯಾಗುತ್ತಿದೆ. ಯಾರೂ ಅಸಿಸ್ಟೆಂಟ್ ಆಗಿ ಮಾತ್ರ ಉಳಿಯಬಾರದು. ಹಾಗಂತ ಸ್ಟಂಟ್ ತೋರಿಸಿ ಅಳಿಯಬಾರದು ಎಂದರು. ತಮ್ಮ ಬಳಿಗೆ ಬಂದವರಿಗೆ ಕಲಿಸೋದು ಮತ್ತು ಅಲ್ಲಿಂದ ಕಳಿಸೋದಷ್ಟೇ ನನ್ನ ಕೆಲಸ. ಹಿಂದೆಲ್ಲ ಕಲಾವಿದರು ರಂಗಭೂಮಿಯಿಂದ ಬರುತ್ತಿದ್ದರು. ಇಂದು ಕಿರುತೆರೆಯಿಂದ ಬರುತ್ತಿದ್ದಾರೆ. ಒಟ್ಟಿನಲ್ಲಿ ಶಿಸ್ತಿನೊಂದಿಗೆ ಬರುವುದು ಮುಖ್ಯ" ಎಂದು ಶುಭ ಕೋರಿದರು ಹಂಸಲೇಖ.
ಚಿತ್ರದ ನಾಯಕ ರೇಣುಕ್ ಕೂಡ ಧಾರಾವಾಹಿಯಿಂದಲೇ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. ಇದು ತಮಗೆ ಮೊದಲ ಚಿತ್ರವಾಗಿದ್ದು, ಮಿಡ್ಲ್ ಕ್ಲಾಸ್ ಹುಡುಗನ ಪ್ರೀತಿಯನ್ನು ಹೇಳುವ ಕತೆಯಲ್ಲಿ ತಮ್ಮದು ಮಿಡ್ಲ್ ಕ್ಲಾಸ್ ಹುಡುಗನ ಪಾತ್ರ ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ನಿರ್ದೇಶಕ ಮಧುಸೂದನ್, 'ಚಿತ್ರದಲ್ಲಿ ನಾಯಕಿಯ ಹೆಸರು ವರ್ಷಾ. ಅದೇ ರೀತಿ ಚಿತ್ರದಲ್ಲಿ ನಾಯಕಿಯ ಎರಡು ಮುಖಗಳನ್ನು ಪರಿಚಯಿಸಲಾಗುತ್ತದೆ. ಹಾಗಾಗಿ ಆ ಎರಡು ವರ್ಷಗಳು ಎಂಬ ಶೀರ್ಷಿಕೆ ಎರಡೆರಡು ಅರ್ಥಗಳನ್ನು ಧ್ವನಿಸುತ್ತದೆ' ಎಂದರು.
ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿರುವ ರಾಮಕೃಷ್ಣ, "ನನ್ನ ಚಿತ್ರರಂಗದ ಇದುವರೆಗಿನ ನಲವತ್ತು ವರ್ಷಗಳಲ್ಲಿ ಆ ಎರಡು ವರ್ಷಗಳೇ ಬೇರೆ" ಎಂದು ಮಾರ್ಮಿಕವಾಗಿ ನುಡಿದರು. ಚಿತ್ರದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ "ಪ್ರೇಮಲೋಕದಿಂದ ಶುರುವಾದ ಹಂಸಲೇಖರ ಮೇಲಿನ ಪ್ರೇಮ ಇಂದಿಗೂ ಮುಂದುವರಿದಿದೆ. ನಾನು ಅವರ ಶಿಷ್ಯನಾಗಿದ್ದರೂ ಮೊದಲ ಬಾರಿಗೆ ಅವರು ನನ್ನ ಸಂಗೀತ ನಿರ್ದೇಶನದ ಸಿಡಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ನನ್ನ ಪಾಲಿನ ದೇವರೆನಿಸಿದ ಅವರ ಉಪಸ್ಥಿತಿಯೇ ಇಂದಿನ ವಿಶೇಷ ಎಂದರು.
ಚಿತ್ರದ ಎಲ್ಲ ಐದು ಹಾಡುಗಳನ್ನು ಬರೆದಿರುವ ಅರಸು ಅಂತಾರೆ, ತಾವು ಯಾವಾಗಲೂ ಕನ್ನಡ ಪದಗಳನ್ನಷ್ಟೇ ಬಳಸಿ ಹಾಡು ಬರೆಯಲು ಪ್ರಯತ್ನಿಸಿರುವುದಾಗಿ ತಿಳಿಸಿದರು. ಚಿತ್ರವನ್ನು ಸಹಜವಾಗಿ ಚಿತ್ರೀಕರಿಸಲು ನಿರ್ದೇಶಕರು ಸಲಹೆ ನೀಡಿದ್ದಾಗಿ ಛಾಯಾಗ್ರಾಹಕ ಕಿಶೋರ್ ಹೇಳಿದರು.
ನಾಯಕಿ ಅಮಿತಾ ಕುಲಾಲ್ ತಮಗೆ ಇದು ಪ್ರಥಮ ಚಿತ್ರವಾಗಿದ್ದು, ಇದರಲ್ಲಿ ಕಾಲೇಜು ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ ಎಂದರು. ನಟ ಕೃಷ್ಣ ನಾಡಿಗ್ ಉಪಸ್ಥಿತರಿದ್ದರು.










