ಶಿವಮೊಗ್ಗ ಜಿ.ಪಂ. ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ವಿಧಿಸುವ ಕೋರಿಕೆ ತಿರಸ್ಕರಿಸಿದ ಜಿಲ್ಲಾಧಿಕಾರಿ

ಶಿವಮೊಗ್ಗ, ಜು. 5: ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡು ಮಾಡಿದ್ದ, ಇಡೀ ರಾಜ್ಯದ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಸಿಆರ್‌ಪಿಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ) 144 ನೇ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸಬೇಕೆಂಬ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಯ ಕೋರಿಕೆಯನ್ನು ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ!
ಇತ್ತೀಚೆಗೆ ಈ ಕುರಿತಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿ.ಪಂ. ಕಚೇರಿ ಆವರಣದಲ್ಲಿ ನಿರಂತರ ನಿಷೇಧಾಜ್ಞೆ ವಿಧಿಸಲು ಅನುಮತಿ ನೀಡದಿರುವ ಜಿಲ್ಲಾಧಿಕಾರಿಗಳ ನಿರ್ಧಾರವನ್ನು ವಿವಿಧ ಪಕ್ಷಗಳ ಕೆಲ ಹಾಲಿ - ಮಾಜಿ ಜಿ. ಪಂ. ಸದಸ್ಯರು, ಪಕ್ಷಗಳ ಮುಖಂಡರು ಸ್ವಾಗತಿಸಿದ್ದಾರೆ. ’ಡಿ.ಸಿ.ಯವರು ಉತ್ತಮ ನಿರ್ಧಾರ ಕೈಗೊಂಡು, ಪ್ರಜಾಪ್ರಭುತ್ವದ ಮೌಲ್ಯ ಉಳಿಸುವ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಸ್ತಾಪ: ಕಳೆದ ಕೆಲ ತಿಂಗಳುಗಳ ಹಿಂದೆ, ಸರ್ಕಾರಿ ಜಮೀನು ಮಂಜೂರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಿ.ಪಂ. ಕಚೇರಿ ಆವರಣದಲ್ಲಿ ಡಿ.ಎಸ್.ಎಸ್. ಸಂಘಟನೆಯ ನೇತೃತ್ವದಲ್ಲಿ ಹಕ್ಕಿಪಿಕ್ಕಿ ಸಮುದಾಯದವರು ದಿಢೀರ್ ಆಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಧರಣಿಯಲ್ಲಿ ವಯೋವೃದ್ದರು, ಮಹಿಳೆಯರು, ಮಕ್ಕಳು ಕೂಡ ಭಾಗಿಯಾಗಿದ್ದರು. ಅಹೋ ರಾತ್ರಿ ಧರಣಿ ಕೈ ಬಿಡುವಂತೆ ಅಧಿಕಾರಿಗಳು ಮಾಡಿದ್ದ ಮನವಿಗೆ ಪ್ರತಿಭಟನಾಕಾರರು ಒಪ್ಪದೆ ಇಡೀ ರಾತ್ರಿ ಕಚೇರಿ ಆವರಣದಲ್ಲಿಯೇ ಬೀಡುಬಿಟ್ಟಿದ್ದರು.
ಈ ಪ್ರಕರಣದ ನಂತರ ಜಿ.ಪಂ. ಸಿಇಓರವರು ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದರು. ಜಿ.ಪಂ. ಕಚೇರಿ ಆವರಣದಲ್ಲಿ ನಡೆದಿದ್ದ ದಿಢೀರ್ ಅಹೋರಾತ್ರಿ ಧರಣಿಯನ್ನು ಉಲ್ಲೇಖಿಸಿದ್ದರು. ಈ ರೀತಿಯ ದಿಢೀರ್ ಹೋರಾಟಗಳು ಕಚೇರಿ ಆವರಣದಲ್ಲಿ ನಡೆದು ಏನಾದರೂ ಅನಾಹುತ ಸಂಭವಿಸಿದರೆ ಆಡಳಿತ ವ್ಯವಸ್ಥೆಗೆ ಕೆಟ್ಟ ಹೆಸರು ಬರಲಿದೆ. ಈ ಹಿನ್ನೆಲೆಯಲ್ಲಿ ಕಚೇರಿ ಆವರಣದಲ್ಲಿ ಸಿಆರ್‌ಪಿಸಿ 144 ನೇ ಕಲಂ ಅನ್ವಯ ನಿರಂತರ ನಿಷೇಧಾಜ್ಞೆ ವಿಧಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು.
ವ್ಯಾಪಕ ಆಕ್ರೋಶ: ಸಿಇಓರವರ ಈ ಕೋರಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇಡೀ ದೇಶದ ಯಾವುದೇ ಸರ್ಕಾರಿ ಕಚೇರಿಗಳಲ್ಲಿಯೂ ಇಲ್ಲದ ನಿಷೇಧಾಜ್ಞೆ ಶಿವಮೊಗ್ಗ ಜಿ.ಪಂ. ಕಚೇರಿ ಆವರಣದಲ್ಲೇಕೆ? ನಾಗರೀಕರ ಪ್ರತಿಭಟನೆಯ ಹಕ್ಕು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂಬಿತ್ಯಾದಿಯಾಗಿ ಟೀಕಾ ಪ್ರಹಾರ ನಡೆಸಿದ್ದರು. ಈ ನಡುವೆ ಜಿಲ್ಲಾಧಿಕಾರಿಗಳು, ಸಿಇಓ ಪ್ರಸ್ತಾವನೆಯನ್ನು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ರವಾನಿಸಿದ್ದರು. ಕಚೇರಿ ಆವರಣದಲ್ಲಿ ನಿಷೇಧಾಜ್ಞೆ ವಿಧಿಸುವಂತಹ ಪರಿಸ್ಥಿತಿಯಿದೆಯೇ ಎಂಬ ಅಭಿಪ್ರಾಯ ಕೇಳಿದ್ದರು. ಜಿಲ್ಲಾ ರಕ್ಷಣಾಧಿಕಾರಿಗಳು ನಿಷೇಧಾಜ್ಞೆ ವಿಧಿಸಲು ಒಪ್ಪಿಗೆ ಸೂಚಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ನಿಷೇಧಾಜ್ಞೆ ಕೋರಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.







