800 ಕುರಿಗಳು, 59 ಯಾಕ್‌ಗಳಿಗಾಗಿ 1967ರ ಸಂಘರ್ಷ!

ಬೀಜಿಂಗ್, ಜು. 5: ಸಿಕ್ಕಿಂ ಗಡಿಯ ವಿಚಾರದಲ್ಲಿ ಭಾರತ ಮತ್ತು ಚೀನಾಗಳ ನಡುವೆ ಈಗ ತಲೆದೋರಿರುವ ಉದ್ವಿಗ್ನತೆಯನ್ನೇ ಹೋಲುವ ಬಿಕ್ಕಟ್ಟೊಂದು 1967ರಲ್ಲೂ ಉದ್ಭವಿಸಿತ್ತು. ಚೀನಾದ ಕುರುಬರಿಗೆ ಸೇರಿದ 800 ಕುರಿಗಳು ಮತ್ತು 59 ಯಾಕ್‌ಗಳು ನಾಪತ್ತೆಯಾಗಿದ್ದು ಅಂದು ಬಿಕ್ಕಟ್ಟು ಸೃಷ್ಟಿಯಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಜೊತೆಗೆ ಭೂ ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣ ಚಟುವಟಿಕೆಗಳ ಆರೋಪಗಳು ಉದ್ವಿಗ್ನತೆಗೆ ತುಪ್ಪ ಸುರಿದವು.
ಸಿಕ್ಕಿಂ ಗಡಿಯ ಸಮೀಪ ಕೆಲಸ ಮಾಡುತ್ತಿರುವ ಟಿಬೆಟ್ ಕುರುಬರ ಸಾಕು ಪ್ರಾಣಿಗಳ ಹಿಂಡನ್ನು ಭಾರತೀಯ ಸೈನಿಕರು ಕದ್ದಿದ್ದಾರೆ ಎಂಬುದಾಗಿ ಚೀನಾ ಆರೋಪಿಸಿತ್ತು ಎನ್ನುವುದು 1965ರಲ್ಲಿ ಉಭಯ ಸರಕಾರಗಳ ನಡುವೆ ನಡೆದ ವಿನಿಮಯಗಳಿಂದ ಬಹಿರಂಗಗೊಂಡಿದೆ. ಆ ಪ್ರಾಣಿಗಳನ್ನು ಹಿಂದಿರುಗಿಸುವಂತೆ ಚೀನಾ ಭಾರತೀಯ ಸೈನಿಕರನ್ನು ಒತ್ತಾಯಿಸಿತ್ತು.
1967ರ ಸಂಘರ್ಷವೂ ಇಂದು ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ಸ್ಥಳದಲ್ಲೇ ನಡೆದಿರುವುದನ್ನು ಸ್ಮರಿಸಬಹುದಾಗಿದೆ.
ಚೀನಾ ಮಾಡಿರುವ ಆರೋಪಗಳು ಭಾರತೀಯ ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಈ ಆರೋಪದಿಂದ ಕೆರಳಿದ ಜನರು ಹೊಸದಿಲ್ಲಿಯ ಶಾಂತಿಪಥ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯ ಎದುರು ನಾಟಕೀಯ ಪ್ರತಿಭಟನೆಯನ್ನೂ ಮಾಡಿದ್ದರು.
ಚೀನಾ ಪ್ರತಿಭಟನೆ
‘‘1965 ಸೆಪ್ಟಂಬರ್ 24ರ ಅಪರಾಹ್ನ ಭಾರತೀಯ ದುಂಡಾವರ್ತಿಗಳ ತಂಡವೊಂದು ಭಾರತೀಯ ಅಧಿಕಾರಿಗಳು ಮತ್ತು ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಹೊಸದಿಲ್ಲಿಯ ಚೀನಾ ರಾಯಭಾರ ಕಚೇರಿಯ ದ್ವಾರದತ್ತ ಕುರಿಗಳ ಹಿಂಡೊಂದನ್ನು ಅಟ್ಟುತ್ತಾ ಬಂದರು. ಭಾರೀ ಗದ್ದಲ ಮಾಡಿದ ಅವರು, ಭಾರತವನ್ನು ಬೆದರಿಸುವುದಕ್ಕಾಗಿ ಚೀನಾ ಅಸಂಗತ ನೆಪಗಳನ್ನು ಸಂಶೋಧಿಸಿದೆ ಎಂದು ಆರೋಪಿಸಿದರು. ಕೆಲವು ಕುರಿ ಮತ್ತು ಕೆಲವು ಯಾಕ್‌ಗಳಿಗಾಗಿ ಚೀನಾ ಜಾಗತಿಕ ಯುದ್ಧವೊಂದನ್ನು ನಡೆಸಲು ಬಯಸಿದೆ ಎಂದು ಅವರು ಆರೋಪಿಸಿದರು’’ ಎಂಬುದಾಗಿ 1965 ಸೆಪ್ಟಂಬರ್ 26ರಂದು ಚೀನಾದ ವಿದೇಶ ವ್ಯವಹಾರಗಳ ಸಚಿವಾಲಯವು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ.
‘‘ಈ ಅಸಹ್ಯ ಪ್ರಹಸನವನ್ನು ಸಂಪೂರ್ಣವಾಗಿ ಭಾರತ ಸರಕಾರವೇ ರೂಪಿಸಿದೆ ಮತ್ತು ಪ್ರದರ್ಶಿಸಿದೆ. ಚೀನಾ ಸರಕಾರವು ಈ ಮೂಲಕ ಭಾರತ ಸರಕಾರಕ್ಕೆ ತನ್ನ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸುತ್ತದೆ’’ ಎಂದು ಅದು ಹೇಳಿತ್ತು.
ಕುರುಬರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ: ಭಾರತದ ಪ್ರತಿಕ್ರಿಯೆ
ಚೀನಾದ ಆರೋಪಗಳಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಐದು ದಿನಗಳ ಬಳಿಕ, ಅಂದರೆ ಅಕ್ಟೋಬರ್ 1ರಂದು ಉತ್ತರಿಸಿತು.
ಟಿಬೆಟ್‌ನ ನಾಲ್ವರು ಕುರುಬರು ತಮ್ಮ ಪ್ರಾಣಿಗಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಪ್ರಸ್ತಾಪಿಸಿದ ಭಾರತೀಯ ವಿದೇಶ ಸಚಿವಾಲಯವು, ‘‘ಇತರ ಟಿಬೆಟ್ ನಿರಾಶ್ರಿತರಂತೆ, ಈ ನಾಲ್ವರು ಕುರುಬರು ತಮ್ಮದೇ ಇಚ್ಛೆಯಲ್ಲಿ ನಮ್ಮ ಒಪ್ಪಿಗೆಯಿಲ್ಲದೆ ಭಾರತಕ್ಕೆ ಬಂದಿದ್ದಾರೆ ಹಾಗೂ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರು ಬಯಸಿದರೆ ಯಾವಾಗ ಬೇಕಾದರೂ ಟಿಬೆಟ್‌ಗೆ ಮರಳಲು ಅವರು ಸ್ವತಂತ್ರರಾಗಿದ್ದಾರೆ. 800 ಕುರಿಗಳು ಮತ್ತು 59 ಯಾಕ್‌ಗಳಿಗೆ ಸಂಬಂಧಿಸಿದಂತೆ, ಭಾರತ ಸರಕಾರವು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಈಗಾಗಲೇ ಉತ್ತರಿಸಿದೆ’’ ಎಂದು ಹೇಳಿದೆ.
‘‘ನಮಗೆ ಯಾಕ್‌ಗಳ ಬಗ್ಗೆ ಗೊತ್ತಿಲ್ಲ. ಕುರಿಗಳ ಬಗ್ಗೆ ಹೇಳುವುದಾದರೆ, ಸಂಬಂಧಿತ ಕುರುಬರು ಟಿಬೆಟ್‌ಗೆ ಮರಳಲು ಇಚ್ಛಿಸಿದರೆ ಯಾವಾಗ ಬೇಕಾದರೂ ಅವುಗಳನ್ನು ಟಿಬೆಟ್‌ಗೆ ತೆಗೆದುಕೊಂಡು ಹೋಗಬಹುದಾಗಿದೆ’’ ಎಂದು ಭಾರತದ ಉತ್ತರ ತಿಳಿಸಿದೆ.
ಚೀನಾ ರಾಯಭಾರ ಕಚೇರಿಯ ಮುಂದೆ ಪ್ರದರ್ಶನ ನಡೆಸಿದ ಪ್ರತಿಭಟನಕಾರರು ತಮ್ಮಂದಿಗೆ 800 ಕುರಿಗಳನ್ನು ಕರೆದುಕೊಂಡು ಹೋಗಿದ್ದರು.







