ಕಲೆಗಾರನಿಗೆ ಅನನ್ಯತೆ ಇರಬೇಕು: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಜು.5: ಯಾವುದೇ ಕಲೆಯಲ್ಲಿ ಕಲೆಗಾರನಿಗೆ ಅನನ್ಯತೆ ಇರಬೇಕು. ಆಗ ಮಾತ್ರ ನೈಜ ಕಲೆಯನ್ನು ಸಮಾಜಕ್ಕೆ ಮುಟ್ಟಿಸಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬುಧವಾರ ನಗರದ ಚಿತ್ರಕಲಾ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಸ್ತುತ ಸಾಲಿನ 46ನೆ ವಾರ್ಷಿಕ ಕಲಾ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರಕಲೆ, ಸಾಹಿತ್ಯ, ಸಂಗೀತ ಸೇರಿ ಯಾವುದೇ ಕ್ಷೇತ್ರ ಇರಲಿ. ಆದರೆ, ಸೃಜನಶೀಲತೆ ಮುಖ್ಯವಾಗಿದೆ ಎಂದರು.
ಹಿಂದಿನ ಕಲೆಯನ್ನೆ ನಾವು ಪ್ರದರ್ಶನ ಮಾಡುವುದಲ್ಲಿ ಯಾವುದೇ ಅರ್ಥವಿಲ್ಲ. ಹೊಸತನವನ್ನು ಈ ಸಮಾಜಕ್ಕೆ ಮುಟ್ಟಿಸುವಲ್ಲಿ ಕಲಾವಿದ ಮುಂದಾಗಬೇಕು. ಇಲ್ಲದಿದ್ದಲ್ಲಿ, ಸೃಜನಶೀಲತೆ ಕಳೆದುಕೊಳ್ಳಲಿದ್ದೇವೆ. ಇನ್ನು ನಿಸರ್ಗ ಬಗ್ಗೆ ಅರಿವು ಮೂಡಿಸುವಂತಹ ಕಲೆಗಳು ಹೆಚ್ಚಾಗಬೇಕೆಂದು ನುಡಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಮಾತನಾಡಿ, ಚಿತ್ರ ಕಲೆಗೆ ಸಂಬಂಧಪಟ್ಟಂತೆ ಪ್ರತಿ ಶೈಕ್ಷಣಿಕ ವಿಭಾಗದಲ್ಲೂ ಒಂದು ವಿಷಯ ಇರಬೇಕು. ಅಲ್ಲದೆ, ರಾಜ್ಯದಲ್ಲಿ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಚಿತ್ರಕಲೆ ವಿಭಾಗ ಇದೆ. ಹೀಗಾಗಿ, ಸರಕಾರವೂ ಚಿತ್ರಕಲೆಗೆ ಪ್ರೋತ್ಸಾಹಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ನಮ್ಮ ಭೂಮಿ ಆರೋಗ್ಯವಾಗಿದ್ದರೆ ಮಾತ್ರ ನಾವು ಸಹ ಆರೋಗ್ಯವಾಗಿರಲು ಸಾಧ್ಯ ಎಂದ ಅವರು, ಹೊಸ ಜೀವನ ಶೈಲಿಗಳಿಂದಲೂ ಶೇಕಡ 50 ರಷ್ಟು ಕಾಯಿಲೆಗಳು ಬರುತ್ತಿವೆ. ಅದೇ ರೀತಿ, ವಾಯು ಮಾಲಿನ್ಯದಿಂದಲೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಹೆಚ್.ವಿ.ಇಂದ್ರಮ್ಮ, ಸಂಚಾಲಕ ಬಾಗೂರು ಮಾರ್ಕಂಡೇಯ, ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ.ಜೆ.ಕಮಲಾಕ್ಷಿ ಸೇರಿ ಪ್ರಮುಖರು ಹಾಜರಿದ್ದರು.







