ವಾರ್ಡ್ ಸಮಿತಿಗಳು ಪಾರದರ್ಶಕತೆಯಿಂದ ಕೂಡಿಲ್ಲ: ಎಎಪಿ ಆರೋಪ

ಬೆಂಗಳೂರು, ಜು.5: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯಲ್ಲಿ ನಡೆಯುತ್ತಿರುವ ವಾರ್ಡ್ ಸಮಿತಿಗಳ ರಚನೆ ಪಾರದರ್ಶಕತೆಯಿಂದ ನಡೆಯುತ್ತಿಲ್ಲ ಎಂದು ಆಮ್ಆದ್ಮಿ ಪಕ್ಷ ಆರೋಪಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಸಹ ಸಂಚಾಲಕಿ ಶಾಂತಲಾ ದಾಮ್ಲೆ, ನಗರ ಪ್ರದೇಶದಲ್ಲಿ ಅಭಿವೃದ್ಧಿಯಾಗಬೇಕಾದರೆ ಸ್ಥಳೀಯರ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸರಕಾರ ಎಲ್ಲರನ್ನೂ ಒಳಗೊಂಡಂತೆ ವಾರ್ಡ್ ಸಮಿತಿ ರಚನೆ ಮಾಡುವಂತೆ ಸೂಚಿಸಲಾಗಿದೆ. ಆದರೆ, ಈಗ ನಡೆಯುತ್ತಿರುವ ವಾರ್ಡ್ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ರಾಜಕಾರಣಿಗಳ ಬೆಂಬಲಿಗರು, ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರು ತುಂಬಿಕೊಂಡಿದ್ದಾರೆ ಎಂದರು.
ಬಿಬಿಎಂಪಿ ಅಧಿಕಾರಿಗಳು ವಾರ್ಡ್ಗಳಲ್ಲಿ ವಾರ್ಡ್ ಸಮಿತಿ ರಚನೆ ಮಾಡುವ ಕುರಿತು ಯಾವುದೇ ರೀತಿಯ ಪ್ರಚಾರ ನಡೆಸಿಲ್ಲ. ಅನಂತರ ವಾರ್ಡ್ ಸಮಿತಿ ರಚನೆ ಮಾಡಿದ ಮೇಲೆ ಯಾರು ಆಯ್ಕೆಯಾಗಿದ್ದಾರೆ. ಆಯ್ಕೆ ಮಾಡಲು ಅನುಸರಿಸಿದ ಮಾನದಂಡಗಳು ಏನು ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ವಾರ್ಡ್ ಸಮಿತಿಯಲ್ಲಿ ನಾವು ಇರುತ್ತೇವೆಂದು ಅರ್ಜಿ ಸಲ್ಲಿಸಿದ್ದವರನ್ನು ನಿರ್ಲಕ್ಷಿಸಿದ್ದಾರೆ. ಹೀಗಾಗಿ ನಗರದಾದ್ಯಂತ ವಾರ್ಡ್ ಸಮಿತಿಯ ಆಶಯಗಳನ್ನು ಪ್ರಚಾರ ಮಾಡಬೇಕು ಎಂದು ಹೇಳಿದರು.
ಈಗಾಗಲೇ ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಬೋಗಸ್ ಬಿಲ್ ಹಗರಣ, ಲೈಸೆನ್ಸ್ ಹಗರಣ ಸೇರಿದಂತೆ ಹಲವಾರು ಹಗರಣಗಳು ಕಾಣುತ್ತಿದ್ದೇವೆ. ಹೀಗಿರುವಾಗ ಮತ್ತಷ್ಟು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಸಲುವಾಗಿ ವಾರ್ಡ್ ಸಮಿತಿಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಕಡೆಗಣಿಸಲಾಗುತ್ತಿದೆ. ಕಾರ್ಪೋರೇಟರ್ಗಳು, ಅಧಿಕಾರಿಗಳು ಹಾಗೂ ಅವರ ಬೆಂಬಲಿಗರು ಸಮಿತಿಯಲ್ಲಿದ್ದಾರೆ ಎಂದು ದೂರಿದರು.







