ಮಲೇರಿಯಾ ಉತ್ಪತ್ತಿ ತಾಣಗಳಿಗೆ ದಂಡ, ಪರವಾನಿಗೆ ರದ್ದು: ಮೇಯರ್ ಎಚ್ಚರಿಕೆ
ಒಂದು ವಾರದ ನಂತರ ದಾಳಿ, ಕ್ರಮ

ಮಂಗಳೂರು, ಜು. 5: ಮಲೇರಿಯಾ ಹಾಗೂ ಡೆಂಗ್‌ನಂತಹ ಸಾಂಕ್ರಾಮಿಕ ರೋಗಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಜನರನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪಾಲಿಕೆ ವತಿಯಿಂದ ಈಗಾಗಲೇ ಗುರುತಿಸಲಾಗಿರುವ ಮಲೇರಿಯಾ ಉತ್ಪತ್ತಿ ತಾಣಗಳಿಗೆ ಒಂದು ವಾರದ ನಂತರ ದಾಳಿ ನಡೆಸಿ ದಂಡ ವಿಧಿಸುವುದು ಹಾಗೂ ಕಟ್ಟಡ ಪರವಾನಿಗೆ ರದ್ದು ಪಡಿಸುವ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಎಚ್ಚರಿಸಿದ್ದಾರೆ.
ಮಹಾನಗರ ಪಾಲಿಕೆಯ ಮೇಯರ್ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿಸಿ ಕಳೆದ ಎರಡು ವರ್ಷಗಳಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಲೇರಿಯಾ ರೋಗ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದರೂ ನಗರದಲ್ಲಿ ಹಲವೆಡೆ ಮಲೇರಿಯಾ ಉತ್ಪತ್ತಿ ತಾಣಗಳನ್ನು ಗುರುತಿಸಿ ಕಳೆದ ಜೂನ್‌ನಲ್ಲಿ ನೋಟಿಸು ನೀಡಲಾಗಿದೆ. ಆದರೆ ಕೆಲವರಿಂದ ಯಾವುದೇ ಸ್ಪಂದನೆಯೂ ವ್ಯಕ್ತವಾಗಿಲ್ಲ. ಹಾಗಾಗಿ ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮನಪಾ ಸಿದ್ಧತೆ ನಡೆಸಿದೆ ಎಂದರು.
2016ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 1,71,701 ಮಂದಿ ಮಲೇರಿಯಾ ತಪಾಸಣೆಗೊಳಪಟ್ಟಿದ್ದು, ಅವರಲ್ಲಿ 11,037 ಮಂದಿಗೆ ಮಲೇರಿಯಾ ರೋಗ ಪತ್ತೆಯಾಗಿತ್ತು. 2017ರಲ್ಲಿ ಜನವರಿಯಿಂದ ಜೂನ್‌ವರೆಗೆ 76,537 ಮಂದಿಯನ್ನು ಮಲೇರಿಯಾ ತಪಾಸಣೆಗೊಳಪಡಿಸಲಾಗಿದ್ದು, ಅವರಲ್ಲಿ 2,448 ಮಂದಿಯಲ್ಲಿ ಮಲೇರಿಯಾ ಪತ್ತೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈವರೆಗೆ ಮಲೇರಿಯಾ ರೋಗದಲ್ಲಿ ಶೇ. 42ರಷ್ಟು ಇಳಿಕೆ ಕಂಡು ಬರುತ್ತಿದೆ. ಮನಪಾದಿಂದ ಮಲೇರಿಯಾ ಹಾಗೂ ಡೆಂಗ್ ಪ್ರಕರಣಗಳನ್ನು ನಿಯಂತ್ರಿಸಲು ಎಂಪಿಡಬ್ಲು ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರ ಜತೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಮಲೇರಿಯಾ ಅತೀ ಸೂಕ್ಷ್ಮ ವಾರ್ಡ್‌ಗಳಿವು!
ಮಲೇರಿಯಾ ಪ್ರಕರಣಗಳನ್ನು ಪರಿಶೀಲಿಸಿ ಈಗಾಗಲೇ ನಗರದ 60ರಲ್ಲಿ 19 ವಾರ್ಡ್‌ಗಳನ್ನು ಅತೀ ಸೂಕ್ಷ್ಮ ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿಸಿ ಅಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.
ಸುರತ್ಕಲ್ (ಪಶ್ಚಿಮ), ಇಡ್ಯಾ-1 (ಪೂರ್ವ), ದೇರೆಬೈಲ್1 (ಉತ್ತರ), ಕದ್ರಿ-1 (ಪದವು), ದೇರೆಬೈಲ್ 2 (ಪೂರ್ವ), ದೇರೆಬೈಲ್ 3 (ದಕ್ಷಿಣ), ಬಿಜೈ, ಕದ್ರಿ 3 (ದಕ್ಷಿಣ), ಪದವು 2 (ಕೇಂದ್ರ), ಪದವು 3 (ಪೂರ್ವ), ಕೇಂದ್ರ ಮಾರುಕಟ್ಟೆ, ಬಂದರು, ಪೋರ್ಟ್, ಮಿಲಾಗ್ರೀಸ್, ಅತ್ತಾವರ, ಮಂಗಳಾದೇವಿ, ಹೊಯ್ಗೆಬಜಾರ್, ಬೋಳಾರ, ಬೆಂಗರೆ ಇವು ಅತೀ ಸೂಕ್ಷ್ಮ ವಾರ್ಡ್‌ಗಳಾಗಿವೆ ಎಂದವರು ಹೇಳಿದರು.
ಸಾಯಿ ಮಾತಾ ಡೈಮಂಡ್, ಐಕಾನ್ ಟವರ್ ಆ್ಯಂಡ್ ಐಕಾನ್ ಸಿಟಿ, ಗ್ರೀಕ್ ಗ್ಯಾಲಕ್ಸಿ, ಲಿಟಲ್ ಸಿಸ್ಟರ್ ಆಫ್ ದಿ ಪುವರ್- ಮರೋಳಿ, ಗ್ರೀನ್ ಪಾರ್ಕ್ (ಬಾಲಾಜಿ ಹೌಸಿಂಗ್), ಎನ್‌ಐಟಿಕೆ ಬಾಯ್ಸಿ ಹಾಸ್ಟೆಲ್, ರಮಾಂಶಿ ಕಾಂಪ್ಲೆಕ್ಸ್, ಫಾದರ್ ಮುಲ್ಲರ್ ಕಾರು ಪಾರ್ಕಿಂಗ್, ವೀನು ಸ್ಮಾರ್ಟ್ ಹೋಮ್, ಗ್ರೀನ್ ಕೌಂಟಿ, ಪೂನಂ ಗಾರ್ಡನ್, ಲಾಂಗ್ ಫೀಲ್ಡ್, ಎಸ್ಸೆಲ್ ಹೈಟ್ಸ್, ಓಶನ್ ವಿವ್ಯೆ, ಕಮರ್ಶಿಯಲ್ ಸೆಂಟರ್, ಸಹಕಾರಿ ಸದನ, ಎನ್ ಫೋರ್ಸ್, ನಾರ್ತನ್ ಸ್ಕೈ ಕೋರ್ಟ್ ಯಾರ್ಡ್, ನಂದ ಗೋಕುಲ ಇವು ಇತರ ನೋಟಿಸು ನೀಡಲಾಗಿರುವ ನಿರ್ಮಾಣ ಹಂತದ ಕಟ್ಟಡಗಳು. ಒಂದು ವಾರದೊಳಗೆ ಈ ಕಟ್ಟಡಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.
ನಗರದಲ್ಲಿ 6 ಡೆಂಗ್ ಪ್ರಕರಣಗಳು ಕದ್ರಿ ಹಾಗೂ ದೇರೆಬೈಲ್‌ನಲ್ಲಿ ಜೂನ್ ತಿಂಗಳಲ್ಲಿ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಾಗವೇಣಿ, ಸಬಿತಾ ಮಿಸ್ಕಿತ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.
ನ್ಯಾಯಾಧೀಶರ ವಸತಿ ಸಂಕೀರ್ಣವೂ ಸೊಳ್ಳೆ ಉತ್ಪತ್ತಿ ತಾಣ!
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 350ಕ್ಕೂ ಅಧಿಕ ನಿರ್ಮಾಣ ಹಂತದ ಕಟ್ಟಡಗಳಿವೆ. ಆ ಕಟ್ಟಡಗಳಲ್ಲಿ ಅತೀ ಹೆಚ್ಚು ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬರುತ್ತಿವೆ. ಈಗಾಗಲೇ ನಿರ್ಮಾಣ ಹಂತದ ಕಟ್ಟಡಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಹಾಗಿದ್ದರೂ ನ್ಯಾಯಾಧೀಶರ ವಸತ ಸಂಕೀರ್ಣ ಸೇರಿದಂತೆ 34 ಕಟ್ಟಡಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬಂದಿವೆ ಎಂದು ಮೇಯರ್ ಕವಿತಾ ಸನಿಲ್ ಆತಂಕ ವ್ಯಕ್ತಪಡಿಸಿದರು.
ಧರ್ಮರಾಜ್‌ರವರ ಕಟ್ಟಡಕ್ಕೂ ನೋಟಿಸು!
ಮಹಾನಗರ ಪಾಲಿಕೆಯ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸದ ಹಾಗೂ ಆಸಕ್ತಿ ತೋರದ 20 ಕಟ್ಟಡಗಳ ಮಾಲಕರಿಗೆ ನೋಟಿಸು ನೀಡಲಾಗಿದೆ. ಅವರಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕನ್ಸಲ್ಟೆಂಟ್ ಧರ್ಮರಾಜ್‌ರವರ ಕಟ್ಟಡವೂ ಸೇರಿದೆ. ಧರ್ಮರಾಜ್‌ರವರ ಉರ್ವಾಸ್ಟೋರ್ ಬಸ್ ನಿಲ್ದಾಣದ ಹಿಂಬದಿಯ ಡಿ3 ಕನ್‌ಸ್ಟ್ರಕ್ಷನ್‌ಗೆ ನೋಟಿಸು ನೀಡಲಾಗಿದೆ ಎಂದು ಮೇಯರ್ ತಿಳಿಸಿದರು.







