ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಭೇಟಿಗೆ ‘ಕೋಲಿ’ ಸಮಾಜದ ಮುಖಂಡರಿಗೆ ಅವಕಾಶ ನಿರಾಕರಣೆ
ಅರವಿಂದ ಲಿಂಬಾವಳಿ ಮೇಲೆ ಹಲ್ಲೆಗೆ ವಿಫಲ ಯತ್ನ

ಬೆಂಗಳೂರು, ಜು. 5: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ‘ಕೋಲಿ’ ಸಮಾಜದ ಕಾರ್ಯಕರ್ತರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಇದರಿಂದ ನಗರದ ಖಾಸಗಿ ಹೊಟೇಲ್ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಮಧ್ಯ ಪ್ರವೇಶಿಸಿ ಪೊಲೀಸರು ಕೋಲಿ ಸಮಾಜದ ಮುಖಂಡರ ಮನವೊಲಿಸಲು ಯತ್ನಿಸಿದರು. ಆದರೂ, ಉದ್ರಿಕ್ತರು ಲಿಂಬಾವಳಿ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರ ಮತಯಾಚನೆ ಪ್ರಚಾರ ಸಭೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕೋಲಿ ಸಮಾಜದ ಮುಖಂಡರು ತಮ್ಮದೇ ಸಮುದಾಯಕ್ಕೆ ಸೇರಿದ ರಾಮನಾಥ್ ಕೋವಿಂದ್ ಅವರನ್ನು ಭೇಟಿಗೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ‘ಕೋಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದು, ಮೀಸಲಾತಿ ಒದಗಿಸುವ ಬಗ್ಗೆ ಮನವಿ ಸಲ್ಲಿಸಿ, ಪುಷ್ಪಗುಚ್ಚ ನೀಡಿ ಅವರನ್ನು ಅಭಿನಂದನೆ ಸಲ್ಲಿಸಲು ಕೋಲಿ ಸಮಾಜದ ಮುಖಂಡರು ಉದ್ದೇಶಿಸಿದ್ದರು.
ಇದಕ್ಕೆ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಲಿಂಬಾವಳಿ, ಕೋವಿಂದ್ ಅವರನ್ನು ಭೇಟಿ ಮಾಡಲು ಕೋಲಿ ಸಮಾಜದ ಮುಖಂಡರಿಗೆ ಅವಕಾಶ ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ಮುಖಂಡರು, ಲಿಂಬಾವಳಿಯೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ, ಏಕವಚನದಲ್ಲಿ ಏರುಧ್ವನಿಯಲ್ಲಿ ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದರು.
ಈ ಘಟನೆಗೂ ಕೆಲವೇ ನಿಮಿಷಗಳ ಮುನ್ನ ಮತಯಾಚನೆ ಮಾಡಿದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಕಾರ್ಯಕ್ರಮ ಮುಗಿಸಿ ನಿರ್ಗಮಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮುಖಂಡರನ್ನು ಅಕ್ಷರಶಃ ಕಂಗೆಡಿಸಿದೆ.
ಬೆಳಗ್ಗೆಯಿಂದ ಕಾದಿದ್ದೇವೆ: ಕೋಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಸಂಬಂಧ ಮನವಿ ಸಲ್ಲಿಸಿ, ನಮ್ಮ ಸಮಾಜದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸಿದ್ದು, ಇಡೀ ದಿನ ಕಾದಿದ್ದೆವು. ಆದರೆ, ನಮ್ಮ ಭೇಟಿಗೆ ಅವಕಾಶ ನೀಡಿಲ್ಲ. ಹೀಗಾಗಿ ಮುಖಂಡರೊಂದಿಗೆ ವಾಗ್ವಾದಕ್ಕೆ ಇಳಿಯಬೇಕಾಯಿತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ನಮ್ಮ ಭೇಟಿಗೆ ಏಕೆ ಅವಕಾಶ ನೀಡಲಿಲ್ಲ ಎಂಬುದು ಗೊತ್ತಾಗಲಿಲ್ಲ. ನಮ್ಮ ಸಮುದಾಯದ ಮತಗಳು ಬಿಜೆಪಿಗೆ ಬೇಕಿಲ್ಲವೇ ಎಂದು ಕೋಲಿ ಸಮಾಜದ ಮುಖಂಡ ರಂಗಸ್ವಾಮಿ ಪ್ರಶ್ನಿಸಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ಮತಯಾಚನೆಗೆ ರಾಜ್ಯಕ್ಕೆ ಆಗಮಿಸಿದ್ದರು. ಹೀಗಾಗಿ ಅಭಿನಂದನೆ ಬೇಡ ಎಂದು ಸೂಚನೆ ನೀಡಿದ್ದರು. ಹೀಗಾಗಿ ಕೋಲಿ ಸಮಾಜದ ಮುಖಂಡರಿಗೆ ಅವಕಾಶ ಕಲ್ಪಿಸಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ನಿರಾಸೆಯಾಗಿದೆ. ಈ ವೇಳೆ ಗೊಂದಲ ಸೃಷ್ಟಿಯಾಗಿದ್ದು, ನೂಕಾಟ-ತಳ್ಳಾಟವಾಗಿದೆ ಅಷ್ಟೇ.
-ಅರವಿಂದ ಲಿಂಬಾವಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ







