ಪುತ್ತೂರು ತಾಲೂಕು ಮಟ್ಟದ ಜನ ಸಂಪರ್ಕ ಸಭೆ

ಪುತ್ತೂರು, ಜು. 5: ಈಗಾಗಲೇ 94ಸಿ ಮತ್ತು 94ಸಿಸಿ ಮೂಲಕ ಬಹತೇಕ ಕುಟುಂಬಗಳಿಗೆ ಮನೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ‘ಇರುವವನೇ ಮನೆಯೊಡೆಯ’ ಕಾನೂನು ಜಾರಿಗೊಳ್ಳಲಿದೆ. ಈ ಕಾನೂನು ಜಾರಿಗೊಂಡ ಬಳಿಕ ಬಹತೇಕ ಬಡವರ ಸ್ವಂತ ನಿವೇಶನ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರಿನ ಬ್ರಹ್ಮಶ್ರೀ ಗುರುನಾರಾಯಣ ಸಭಾಭವನದಲ್ಲಿ ಬುಧವಾರ ನಡೆದ ಪುತ್ತೂರು ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ, ಪಂಗಡವರು ಸೇರಿದಂತೆ ಹಲವಾರು ಬಡ ಕುಟುಂಬಗಳು ಇಂದಿಗೂ ನಿವೇಶನ ರಹಿತರಾಗಿದ್ದಾರೆ. ಈ ಬಾರಿ ಸರ್ಕಾರದಿಂದ ಪರಿಶಿಷ್ಠ ಜಾತಿ ಮತ್ತು ಪಂಗಡಗಳಿಗೆ ತಾಲ್ಲೂಕಿನಲ್ಲಿ ಮಂಜೂರಾದ 1,200 ಮನೆಗಳು ನಿವೇಶನವಿಲ್ಲದ ಕಾರಣ ಹಿಂದಕ್ಕೆ ಹೋಗಿದೆ. ನಗರದ ಹೃದಯ ಭಾಗದಲ್ಲಿರುವ ಬ್ರಹ್ಮನಗರ ದಲಿತ ಕಾಲನಿಯ ಕುಟುಂಬಗಳಿಗೆ ಅವರ ಹೆಸರಿನಲ್ಲಿ ನಿವೇಶನವಿಲ್ಲದ ಕಾರಣ ಮನೆ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಜಮೀನು ಖಾಸಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿದೆ. ಸರ್ಕಾರವು ಉಳುವವನೇ ಹೊಲದೊಡೆಯ, ಅಕ್ರಮ ಸಕ್ರಮ ಮತ್ತು ಮೂರುವವನೇ ಮಾರುವವ ಮೊದಲಾದ ಕಾನೂನುಗಳನ್ನು ಅನುಷ್ಠಾನಗೊಳಿಸಿದ ಬಳಿಕ ಬಹುತೇಕರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ. ಇರುವವನೇ ಮನೆಯೊಡೆಯ ಕಾನೂನು ಜಾರಿಗೊಂಡಲ್ಲಿ ಬ್ರಹ್ಮನಗರ ದಲಿತ ಕಾಲನಿ ಸೇರಿದಂತೆ ಹಲವು ಕಡೆಗಳಲ್ಲಿ ಖಾಸಗಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸ್ತವ್ಯವಿರುವ ಬಡ ಕುಟುಂಬಗಳಿಗೆ ಸಹಕಾರಿಯಾಗಲಿದೆ ಎಂದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ. ರಘುನಂದನ್ ಮೂರ್ತಿ, ತಹಶೀಲ್ದಾರ್ ಅನಂತಶಂಕರ್, ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ , ಕಾರ್ಯನಿರ್ವಹಣಾಧಿಕಾರಿ ಎಸ್. ಜಗದೀಶ್, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸರ್ವೋತ್ತಮ ಗೌಡ , ತಾಲೂಕು ಪಂಚಾಯತ್ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಉಷಾ ಅಂಚನ್, ದಿವ್ಯ ಪುರುಷೋತ್ತಮ ಗೌಡ, ಸುಜಾತ ಕೃಷ್ಣ , ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಪೌರಾಯುಕ್ತೆ ರೂಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಉಪ ತಹಶೀಲ್ದಾರ್ ಶ್ರೀಧರ್ ಪಿ ಸ್ವಾಗತಿಸಿ, ಕಲಾಪ ನಿರ್ವಹಿಸಿದರು.







