ಪಂಜಿಮೊಗರು: ಮದ್ಯದಂಗಡಿಗೆ ಡಿವೈಎಫ್‌ಐ ವಿರೋಧ

ಮಂಗಳೂರು, ಜು.5: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತಲಿನ ಮದ್ಯದಂಗಡಿಗಳು ಬಾಗಿಲು ಮುಚ್ಚಿದ್ದು, ಈಗ ಬಾರ್ ಮಾಲಕರು ಹೊಸ ಸ್ಥಳಗಳನ್ನು ಹುಡುಕಾಟದಲ್ಲಿ ತೊಡಗಿದ್ದಾರೆ. ಜನವಸತಿ ಪ್ರದೇಶಗಳಲ್ಲಿ ಮದ್ಯದಂಗಡಿಗಳು ತಲೆಯೆತ್ತುವ ಆತಂಕ ನಾಗರಿಕರಲ್ಲಿ ಮೂಡಿದೆ.
ಕೂಳೂರು ಪರಿಸರದ ಮದ್ಯದಂಗಡಿಗಳು ಮುಚ್ಚಿದ್ದು, ಅವುಗಳನ್ನು ಕೂಳೂರು ಕಾವೂರು ಪಂಜಿಮೊಗರು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಾರಂಭಿಸುವ ಪ್ರಯತ್ನಗಳು ಪ್ರಾರಂಭವಾಗಿದೆ. ಆದರೆ ಈ ಸ್ಥಳದಲ್ಲಿ ಜನವಸತಿ, ಶಿಕ್ಷಣ, ಧಾರ್ಮಿಕ ಕೇಂದ್ರಗಳಿದ್ದು, ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಬಾರದು ಎಂದು ಒತ್ತಾಯಿಸಿ ಸಾರ್ವಜನಿಕರ ಪರವಾಗಿ ಡಿವೈಎಫ್‌ಐ ಪಂಜಿಮೊಗರು ಘಟಕವು ಮೇಯರ್, ಮನಪಾ ಆಯುಕ್ತರು, ಮನಪಾ ಆರೋಗ್ಯಾಧಿಕಾರಿ ಹಾಗೂ ಕಾವೂರು ಠಾಣಾಧಿಕಾರಿಗೆ ಮನವಿ ಸಲ್ಲಿಸಿದೆ.
ಪಂಜಿಮೊಗರು ಘಟಕದ ಮುಖಂಡರಾದ ನೌಶಾದ್, ಅನಿಲ್, ಚರಣ್, ಖಲೀಲ್, ರೊನಲ್ಡ್, ಸಂತೋಷ್ ನಿಯೋಗದಲ್ಲಿದ್ದರು.
Next Story





