ಜಿ ಎಸ್ ಟಿ ಎಫೆಕ್ಟ್ : ಟಾಟಾ ಮೋಟಾರ್ಸ್ ವಾಹನಗಳ ಬೆಲೆಯಲ್ಲಿ ಭಾರೀ ಕಡಿತ

ಹೊಸದಿಲ್ಲಿ, ಜು. 5: ದೇಶದ ಖ್ಯಾತ ಆಟೋಮೊಬೈಲ್ ಕಂಪೆನಿ ಟಾಟಾ ಮೋಟಾರ್ಸ್ ಬುಧವಾರ ತನ್ನ ಪ್ಯಾಸೆಂಜರ್ ವಾಹನಗಳ ಬೆಲೆಯಲ್ಲಿ ರೂ. 2.17 ಲಕ್ಷದಷ್ಟು ಇಳಿಕೆ ಮಾಡಿ ಜಿ ಎಸ್ ಟಿ ಲಾಭವು ಗ್ರಾಹಕರಿಗೆ ತಲುಪುವಂತೆ ಮಾಡಿದೆ.
ಜಿ ಎಸ್ ಟಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಮ್ಮ ವಾಹನಗಳಿಗೆ ಶೇ 12ರಷ್ಟು ದರ ಇಳಿಕೆ ಆಫರ್ ನಾವು ಮಾಡುತ್ತಿದ್ದು ಇದರಿಂದ ವಾಹನಗಳ ಬೆಲೆಯಲ್ಲಿ 3,300 ರೂ. ರಿಂದ ಹಿಡಿದು 2.17 ಲಕ್ಷ ರೂ. ತನಕ ವಾಹನದ ಮಾಡೆಲ್ ಆಧಾರದ ಮೇಲೆ ದರಗಳಲ್ಲಿ ಇಳಿಕೆಯಾಗುವುದು ಎಂದು ಟಾಟಾ ಮೋಟಾರ್ಸ್ (ಪ್ಯಾಸೆಂಜರ್ ವೆಹಿಕಲ್ಸ್ ಬಿಸಿನೆಸ್ ಯುನಿಟ್) ಅಧ್ಯಕ್ಷ ಮಾಯಾಂಕ್ ಪರೀಕ್ ಹೇಳಿದ್ದಾರೆ.
ದೇಶಾದ್ಯಂತ ಏಕರೂಪದ ತೆರಿಗೆ ನೀತಿ ರೂಪಿಸುವ ನಿಟ್ಟಿನಲ್ಲಿ ಜಿ ಎಸ್ ಟಿ ಜಾರಿಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಟಾಟಾ ಮೋಟಾರ್ಸ್ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದೂ ಅವರು ಹೇಳಿದ್ದಾರೆ.
ಜಿ ಎಸ್ ಟಿ ದೇಶದ ಆರ್ಥಿಕತೆಗೆ ಮುಖ್ಯವಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಯುಗವನ್ನು ಆರಂಭಿಸಲಿದೆ ಎಂದು ಅವರು ವರ್ಣಿಸಿದ್ದಾರೆ.
ಮಂಗಳವಾರ ಮಹೀಂದ್ರ ಎಂಡ್ ಮಹೀಂದ್ರ ಕೂಡ ತನ್ನ ಯುಟಿಲಿಟಿ ವಾಹನಗಳು ಹಾಗೂ ಎಸ್ ಯು ವಿ ಗಳ ಬೆಲೆಯಲ್ಲಿ ಸರಾಸರಿ ಶೇ 6.9ರಷ್ಟು ಇಳಿಕೆ ಘೋಷಿಸಿತ್ತು. ಸಣ್ಣ ಕಮರ್ಷಿಯಲ್ ವಾಹನಗಳ ಬೆಲೆಯನ್ನೂ ಕಂಪೆನಿ ಇಳಿಸಿತ್ತು.







