ಸಿಕ್ಕಿಂ ಗಡಿ ಬಿಕ್ಕಟ್ಟು: ದಾರಿ ತಪ್ಪಿಸುತ್ತಿರುವ ಭಾರತ : ಚೀನಾ ಆರೋಪ

ಬೀಜಿಂಗ್, ಜು.5: ಸಿಕ್ಕಿಂ ವಿಭಾಗದಲ್ಲಿ ಪ್ರಸಕ್ತ ಉಂಟಾಗಿರುವ ಬಿಕ್ಕಟ್ಟಿನ ವಿಷಯದಲ್ಲಿ ಭಾರತವು ಜನರ ದಾರಿ ತಪ್ಪಿಸುತ್ತಿದೆ ಎಂದು ಚೀನಾ ಆರೋಪಿಸಿದೆ. ದೋಕ್ಲಮ್ ಪ್ರದೇಶವು ತ್ರಿರಾಷ್ಟ್ರಗಳ ಗಡಿಗಳು ಸಂಧಿಸುವ ಸ್ಥಳದಲ್ಲಿದೆ ಎಂಬ ಭಾರತದ ಹೇಳಿಕೆ ಸರಿಯಲ್ಲ ಎಂದು ಚೀನಾದ ವಿದೇಶ ವ್ಯವಹಾರ ಸಚಿವಾಲಯದ ವಕ್ತಾರ ಜೆನ್ ಶುವಂಗ್ ಹೇಳಿದ್ದಾರೆ.
ಚೀನಾದ ಪಡೆಗಳು ಸಿಕ್ಕಿಂ ವಲಯದಲ್ಲಿರುವ ‘ಚಿಕನ್ಸ್ ನೆಕ್’ ಸಮೀಪ ರಸ್ತೆಯೊಂದನ್ನು ನಿರ್ಮಿಸುತ್ತಿದ್ದು ಇದರಿಂದ ಈಶಾನ್ಯದ ರಾಜ್ಯಗಳ ಪ್ರವೇಶ ದ್ವಾರವನ್ನು ಅಪಾಯಕ್ಕೆ ಒಳಪಡಿಸಿದಂತಾಗಿದೆ ಎಂದು ಭಾರತವು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ. 1890ರ ಚೀನಾ-ಬ್ರಿಟನ್ ಒಪ್ಪಂದದ ಪ್ರಕಾರ ಗಿಮೊಚಿ ಪರ್ವತದ ಪೂರ್ವ ದಿಂದ ಸಿಕ್ಕಿಂ ವಿಭಾಗದ ಗಡಿ ಆರಂಭವಾಗುತ್ತದೆ. ಆದರೆ ಪರ್ವತಕ್ಕಿಂತ 2,000 ಮೀಟರ್ ದೂರದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ . ಇದಕ್ಕೂ ಭಾರತ-ಚೀನಾ-ಟಿಬೆಟ್ ತ್ರಿರಾಷ್ಟ್ರ ಗಡಿ ಸಂಧಿಗೂ ಯಾವುದೇ ಸಂಬಂಧವಿಲ್ಲ ಎಂದು ಜೆನ್ ಹೇಳಿದರು. ಇಲ್ಲಿ ಚೀನಾದ ಪಡೆಗಳು ನಡೆಸುತ್ತಿರುವ ರಸ್ತೆ ನಿರ್ಮಾಣ ಕಾರ್ಯವನ್ನು ಅವರು ಬಲವಾಗಿ ಸಮರ್ಥಿಸಿಕೊಂಡರು.
ಚೀನಾವು ಸಿಕ್ಕಿಂ ಗಡಿ ಬಳಿ ನಡೆಸುತ್ತಿರುವ ರಸ್ತೆ ನಿರ್ಮಾಣ ಕಾರ್ಯದ ಬಗ್ಗೆ ಆತಂ ಕ ವ್ಯಕ್ತಪಡಿಸಿದ್ದ ಭಾರತ, ಇದರಿಂದ ತನಗೆ ಈಶಾನ್ಯ ರಾಜ್ಯಗಳನ್ನು ತಲುಪಲು ತೊಂದರೆಯಾಗುತ್ತದೆ ಎಂದು ಹೇಳಿತ್ತು.





