ಯುವಕನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಕಲಬುರಗಿ, ಜು. 5: ವಿಳಾಸ ಕೇಳುವ ನೆಪದಲ್ಲಿ ಗುಂಪೊಂದು ಯುವಕನನ್ನು ಅಪಹರಿಸಿ, ಆತನ ಮೈಮೇಲೆ ಪಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ವಿಫಲಯತ್ನ ನಡೆಸಿರುವ ಘಟನೆ ಇಲ್ಲಿನ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ದುಷ್ಕರ್ಮಿಗಳಿಂದ ತೀವ್ರ ಸುಟ್ಟ ಗಾಯಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಯುವಕನನ್ನು ಮಿಲ್ಲತ್ ನಗರದ ನಿವಾಸಿ ಮುಹಮ್ಮದ್ ನೂರುದ್ದೀನ್ ಶೇಖ್ (22) ಎಂದು ಗುರುತಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಗಂಜ್ ಪ್ರದೇಶದಲ್ಲಿನ ಸಾಮಿಲ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೂರುದ್ದೀನ್ ಬೆಳಗ್ಗೆ 9:30ರ ಸುಮಾರಿಗೆ ಎಂದಿನಂತೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ಇಬ್ಬರು ದುಷ್ಕರ್ಮಿಗಳು ಆತನನ್ನು ಅಪಹರಿಸಿದ್ದಾರೆ. ಬಳಿಕ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಸಮೀಪದಲ್ಲಿನ ಹಾಗರಗಾ ಕ್ರಾಸ್ ಬಳಿ ಇರುವ ಇನಾಂದಾರ್ ಕಾಲೇಜ್ ಹಿಂಭಾಗದಲ್ಲಿ ಯುವಕನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ವೇಳೆ ಯುವಕ ಜೋರಾಗಿ ಕೂಗಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ. ಆ ನಂತರ ಸುಟ್ಟ ಗಾಯಗಳಿಂದ ಬೊಬ್ಬಿಡುತ್ತಿದ್ದ ಯುವಕನನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ.
ಕೈ-ಕಾಲು, ಎದೆ-ಮುಖ ಸೇರಿದಂತೆ ಸುಟ್ಟ ಗಾಯಗಳಾಗಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಈ ಕೃತ್ಯವನ್ನು ಯಾರು ಮತ್ತು ಯಾವ ಕಾರಣಕ್ಕಾಗಿ ನಡೆಸಿದ್ದಾರೆಂಬುದು ಗೊತ್ತಾಗಿಲ್ಲ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ವಿಶ್ವ ವಿದ್ಯಾಲಯ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ವಿಳಾಸ ಕೇಳುವ ನೆಪದಲ್ಲಿ ಯುವಕನನ್ನು ಅಪಹರಿಸಿದ ದುಷ್ಕರ್ಮಿಗಳು ಆತನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಯಾರು ಮತ್ತು ಯಾವ ಕಾರಣಕ್ಕಾಗಿ ಈ ಕೃತ್ಯ ನಡೆಸಿದ್ದಾರೆಂದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಸಂಬಂಧ ದೂರು ದಾಖಲಿಸಿ, ಆರೋಪಿಗಳ ಪತ್ತೆಗೆ ಶೋಧ ಕೈಗೊಂಡಿದ್ದೇವೆ -ಪರಶುರಾಮ್ ಎಸೈ ವಿಶ್ವವಿದ್ಯಾಲಯ ಪೊಲೀಸ್ ಠಾಣೆ







