ಶರತ್ ಕೊಲೆಯತ್ನ ಖಂಡಿಸಿ ‘ಬಿಸಿರೋಡ್ ಚಲೋ’ ಪ್ರತಿಭಟನೆ: ಮುರಳೀಕೃಷ್ಣ ಹಸಂತಡ್ಕ
ಪುತ್ತೂರು, ಜು. 5: ಬಿ.ಸಿ.ರೋಡ್‌ನಲ್ಲಿ ಮಂಗಳವಾರ ಆರೆಸ್ಸೆಸ್ ಕಾರ್ಯಕರ್ತ ಶರತ್ ಮೇಲೆ ನಡೆದ ಕೊಲೆಯತ್ನ ಘಟನೆಯನ್ನು ಖಂಡಿಸಿ ಮತ್ತು ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸುವ ಷಡ್ಯಂತ್ರದ ವಿರುದ್ಧ ಶುಕ್ರವಾರ ಬಿ.ಸಿ.ರೋಡ್‌ನಲ್ಲಿರುವ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಹಿತರಕ್ಷಣಾ ಸಮಿತಿಯ ಜಿಲ್ಲಾ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.
ಅವರು ಬುಧವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬಿ.ಸಿ.ರೋಡಿನ ತಾಲೂಕು ಕಚೇರಿಯ ಮುಂಭಾಗದಲ್ಲಿ ‘ಬಿಸಿ ರೋಡ್ ಚಲೋ’ -ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತವಿರುವ ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಜ್ಯ ಸರ್ಕಾರ ಇಸ್ಲಾಂ ಪ್ರಾಯೋಜಿತ ಭಯೋತ್ಪಾದನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಹಿಂದೂಗಳ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಮತ್ತು ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಸೂಕ್ತ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿಕೊಳ್ಳುವ ಷಡ್ಯಂತ್ರ ನಡೆಸುವ ಮೂಲಕ ಹಿಂದೂಗಳ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಮತ್ತು ಹಿಂದೂಗಳ ಮೇಲೆ ನಡೆದ ಹಲವಾರು ದೌರ್ಜನ್ಯ ಪ್ರಕರಣಗಳಿಂದಾಗಿ ಮರಗಟ್ಟಿದ ಹಿಂದೂಗಳ ಭಾವನೆಗಳಿಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಈ ಪ್ರತಿಭಟನೆ ಎಂದರು.
ಹಿಂದೂ ಸಂಘಟನೆಯ ಕಾರ್ಯಕರ್ತ ಶರತ್ ಮೇಲೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಹಿತರಕ್ಷಣಾ ಸಮಿತಿ ಯಾವುದೇ ಬಂದ್‌ಗೆ ಕರೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಮುರಳೀಕೃಷ್ಣ ಹಸಂತಡ್ಕ, ನಾವು ಕಾನೂನಿಗೆ ಬೆಲೆ ನೀಡುವವರಾಗಿದ್ದೇವೆ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಕೊಲೆಯತ್ನ ನಡೆದಿರುವುದರಿಂದ ಅನಿವಾರ್ಯವಾಗಿ ಸೆಕ್ಷನ್ ನಡುವೆಯೂ ಪ್ರತಿಭಟನೆ ಮಾಡಬೇಕಾಗಿ ಬಂದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಹಿತರಕ್ಷಣಾ ಸಮಿತಿಯ ಇನ್ನೋರ್ವ ಜಿಲ್ಲಾ ಸಂಚಾಲಕ ಹರೀಶ್ ಪೂಂಜ, ಹಿಂದೂ ಜಾಗರಣಾ ವೇದಿಕೆಯ ಮಂಗಳೂರು ವಿಭಾಗ ಸಹ ಸಂಚಾಲಕ ರವಿರಾಜ್ ಶೆಟ್ಟಿ ಕಡಬ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಶ್ರೀಧರ್ ತೆಂಕಿಲ ಹಾಜರಿದ್ದರು.







