ತನ್ನನ್ನು ಬೆಂಬಲಿಸಲು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಮನವಿ

ಬೆಂಗಳೂರು, ಜು. 5: ಎನ್‌ಡಿಎ ಮಿತ್ರಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು, ಇಂದು ಬೆಂಗಳೂರು ನಗರಕ್ಕೆ ಆಗಮಿಸಿ ಬಿಜೆಪಿ ಶಾಸಕರು ಹಾಗೂ ಸಂಸದರ ಸಭೆ ನಡೆಸಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬುಧವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್, ಶಾಸಕರು ಹಾಗೂ ಸಂಸದರನ್ನು ಉದ್ದೇಶಿಸಿ ರಾಷ್ಟ್ರಪತಿ ಚುನಾವಣೆಯಲ್ಲಿ ತಮಗೆ ಮತ ಹಾಕುವಂತೆ ಮನವಿ ಮಾಡಿದರು.
ಸಭೆಯ ಆರಂಭದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಸೇರಿದಂತೆ ಮುಖಂಡರು ಕೋವಿಂದ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.
ಇದೇ ವೇಳೆ ಶ್ರೀಗಂಧದಲ್ಲಿ ಕೆತ್ತಿರುವ ಮೈಸೂರು ಅರಮನೆಯ ಪ್ರತಿಕೃತಿಯನ್ನು ನೀಡಿ ಗೌರವಿಸಿದರು. ಸಂಸದ ವಿನೋದ್ ಸೋನ್ಕರ್, ರಾಜ್ಯಸಭಾ ಸದಸ್ಯ ಶೆಂಸೆದ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರೋಜ್ ಪಾಂಡೆ, ಕೇಂದ್ರ ಸಚಿವರಾದ ಥಾವರ್ ಚಂದ್ ಗೆಹ್ಲೋಟ್, ಮುಖಂಡರಾದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಬಸವರಾಜ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜು.1ರಂದು ಯುಪಿಎ ಮಿತ್ರಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಮೀರಾ ಕುಮಾರ್ ಅವರು, ನಗರಕ್ಕೆ ಆಗಮಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮತ ಯಾಚಿಸಿದರು. ಇದೀಗ ಎನ್‌ಡಿಎ ಮಿತ್ರಪಕ್ಷಗಳ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಮತಯಾಚನೆ ಮಾಡಿದ್ದಾರೆ.
ಪಕ್ಷೇತರರ ಬೆಂಬಲ: ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಶಾಸಕರಾದ ಪಿ.ರಾಜೀವ್, ಮೊಳಕಾಲ್ಮೂರು ಕ್ಷೇತ್ರದ ತಿಪ್ಪೇಸ್ವಾಮಿ, ಕಂಪ್ಲಿ ಸುರೇಶ್ ಬಾಬು, ಪಕ್ಷೇತರ ಶಾಸಕ ಕೂಡ್ಲಿಗಿ ನಾಗೇಂದ್ರ ಸೇರಿದಂತೆ ಇನ್ನಿತರರು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಕೋವಿಂದ್ ಅವರಿಗೆ ಪುಷ್ಪಗುಚ್ಚ ನೀಡಿ ಬೆಂಬಲ ಸೂಚಿಸಿದರು.
ಅದ್ದೂರಿ ಸ್ವಾಗತ: ರಾಷ್ಟ್ರಪತಿ ಚುನಾವಣೆ ಪ್ರಚಾರಕ್ಕಾಗಿ ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಇಲ್ಲಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಮನಾಥ್ ಕೋವಿಂದ್ ಅವರಿಗೆ ಡೊಳ್ಳು ಕುಣಿತ, ಮಂಗಳವಾದ್ಯಗಳ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು.







