ಈ ಮಹಿಳೆಯ ಹೊಟ್ಟೆಯಲ್ಲಿದ್ದ ಗೆಡ್ಡೆಯ ತೂಕ ತಿಳಿದರೆ ಒಂದು ಕ್ಷಣ ಬೆಚ್ಚಿಬೀಳುತ್ತೀರಿ…

ದುಬೈ, ಜು.5: ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರ ಹೊಟ್ಟೆಯೊಳಗಿದ್ದ ಗೆಡ್ಡೆಯನ್ನು ಕಂಡು ದುಬೈನ ಲತೀಫಾ ಆಸ್ಪತ್ರೆಯ ವೈದ್ಯರ ತಂಡ ಒಂದು ಕ್ಷಣ ಬೆಚ್ಚಿಬಿದ್ದಿತ್ತು. 40 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಬರೋಬ್ಬರಿ 17.5 ಕೆ.ಜಿ. ತೂಕದ ಗೆಡ್ಡೆಯಿದ್ದು, ಇದು ಅವರ ಪ್ರಾಣಕ್ಕೆ ಅಪಾಯವೊಡ್ಡುವ ಸಾಧ್ಯತೆಯಿತ್ತು ಎಂದು ವೈದ್ಯರು ಹೇಳಿದ್ದಾರೆ.
ಇಂತಹ ಪ್ರಕರಣ ಯುಎಇಯಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಅಪರೂಪದ್ದಾಗಿದೆ. ಈ ಬೃಹತ್ ಆಕಾರದ ಗೆಡ್ಡೆಯು ಮಹಿಳೆಯ ಆರೋಗ್ಯ ಸ್ಥಿತಿಯನ್ನು ಹದಗೆಟ್ಟಿಸಿದ್ದಲ್ಲದೆ, ಆಕೆಯ ಪ್ರಾಣಕ್ಕೆ ಅಪಾಯವೊಡ್ಡುವ ಹಂತಕ್ಕೆ ತಲುಪಿತ್ತು ಎಂದು ಆಸ್ಪತ್ರೆಯ
ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಅಮಲ್ ಅಲ್ ಖಾದ್ರಾ ತಿಳಿಸಿದ್ದಾರೆ.
ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ಅವರ ಹೃದಯ ಬಡಿತ ಬಹಳ ಹೆಚ್ಚಿತ್ತಲ್ಲದೆ ಹಿಬೋಗ್ಲೋಬಿನ್ 7ಕ್ಕೆ ಇಳಿಕೆಯಾಗಿತ್ತು. ಕೂಡಲೇ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದು, ಕುಟುಂಬಸ್ಥರಿಂದ ಒಪ್ಪಿಗೆ ಸಿಕ್ಕಿದ ನಂತರ ಗೆಡ್ಡೆಯನ್ನು ಹೊರತೆಗೆಯಲಾಯಿತು. ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದವರು ಮಾಹಿತಿ ನೀಡಿದ್ದಾರೆ.





