ಲೋಕ ಕಲ್ಯಾಣಕ್ಕಾಗಿ ಲಕ್ಷ ತುಳಸಿ ಅರ್ಚನೆ

ಭಟ್ಕಳ, ಜು.5: ಮಾರೂಕೇರಿಯ ಹೂತ್ಕಳದ ಶ್ರೀ ಧನ್ವಂತರಿ ವಿಷ್ಣುಮೂರ್ತಿ ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಲೋಕ ಕಲ್ಯಾಣಾರ್ಥವಾಗಿ ಲಕ್ಷ ತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನೆರವೇರಿತು.
ದೇವಸ್ಥಾನದಲ್ಲಿ ಸಹಸ್ರದೂರ್ವಾವನೆ, ವಿಶೇಷ ಅಲಂಕಾರ, ಶ್ರೀ ಧನ್ವಂತರಿಯಲ್ಲಿ ಶ್ರೀ ಸೂಕ್ತ, ಪುರುಷ ಸೂಕ್ತಾದಿ ವಿಶೇಷ ಅಭಿಷೇಕ, ಕಲ್ಪೋಕ್ತ ಸಹಸ್ರನಾಮ ನಡೆಸಲಾಯಿತು.
ಕಾರ್ಯಕ್ರಮವನ್ನು ಕಿತ್ರೆ ಶಿವಶಾಂತಿಕಾ ಧಾರ್ಮಿಕ ಮಂಡಳಿ ಮತ್ತು ಧನ್ವಂತರಿ ಧಾರ್ಮಿಕ ಸೇವಾ ಸಮಿತಿ ನೆರವೇರಿಸಿತು. ಮಧ್ಯಾಹ್ನ 3 ಗಂಟೆಯಿಂದ ಆರಂಭಗೊಂಡ ಅತಿಥಿ ಕಲಾವಿದರಿಂದ ತ್ರ್ಯಯಂಬಕ ರುದ್ರ ಮಹತ್ಮೆ ಯಕ್ಷಗಾನ ತಾಳಮದ್ದಲೆ ನಡೆಯಿತು.
ಕಾರ್ಯಕ್ರಮದ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ದೇವಸ್ಥಾನದ ಅರ್ಚಕ ಶಂಕರ ಭಟ್ಟ, ವರ್ಷಂಪ್ರತಿಯಂತೆ ಈ ಸಲವೂ ಕೂಡ ಲೋಕ ಕಲ್ಯಾಣಾರ್ಥವಾಗಿ ದೇವಸ್ಥಾನದಲ್ಲಿ ತಾಲ್ಲೂಕಿನ ವಿವಿಧ ಭಾಗದ ಐವತ್ತಕ್ಕೂ ಅಧಿಕ ಅರ್ಚಕರಿಂದ ಲಕ್ಷ ತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣು ಸಹಸ್ರನಾಮ ನಡೆಸಲಾಗಿದೆ. ಈ ಸಲದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರಕೃಪೆಗೆ ಪಾತ್ರರಾಗಿದ್ದಾರೆ ಎಂದರು.





