ಸೌದಿ: 4,500 ಕೋಟಿ ರೂ. ‘ಆಶ್ರಿತ ತೆರಿಗೆ’ ಸಂಗ್ರಹ ಗುರಿ

ರಿಯಾದ್, ಜು. 5: ತನ್ನಲ್ಲಿ ಕೆಲಸ ಮಾಡುತ್ತಿರುವ ವಲಸಿಗರ ಕುಟುಂಬ ಸದಸ್ಯರಿಂದ 2.6 ಬಿಲಿಯ ರಿಯಾಲ್ (ಸುಮಾರು 4,500 ಕೋಟಿ ರೂಪಾಯಿ) ‘ಆಶ್ರಿತ ತೆರಿಗೆ’ಯನ್ನು ಸಂಗ್ರಹಿಸುವ ಗುರಿಯನ್ನು ಸೌದಿ ಅರೇಬಿಯ ಹಾಕಿಕೊಂಡಿದೆ ಎಂದು ಪಾಸ್‌ಪೋರ್ಟ್‌ಗಳ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಷ್ಟ್ರೀಯ ಮಾಹಿತಿ ಕೇಂದ್ರ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳ ಪ್ರಕಾರ, ದೇಶದಲ್ಲಿ ನೋಂದಾಯಿತ ಆಶ್ರಿತರ ಸಂಖ್ಯೆ ಇಂದಿನ (ಬುಧವಾರ) ಮಟ್ಟಿಗೆ 22,21,551.
‘‘ಪ್ರತಿಯೊಬ್ಬ ಆಶ್ರಿತನಿಂದ ತಿಂಗಳಿಗೆ 100 ಸೌದಿ ರಿಯಾಲ್ (1728 ರೂಪಾಯಿ) ಸಂಗ್ರಹಿಸಿದರೆ, ಅದು ತಿಂಗಳಿಗೆ 222 ಮಿಲಿಯ ರಿಯಾಲ್ (ಸುಮಾರು 384 ಕೋಟಿ ರೂಪಾಯಿ) ಹಾಗೂ ವರ್ಷಕ್ಕೆ 2.665 ಬಿಲಿಯ ರಿಯಾಲ್ (4,500 ಕೋಟಿ ರೂಪಾಯಿ) ಆಗುತ್ತದೆ’’ ಎಂದು ಪಾಸ್‌ಪೋರ್ಟ್ಸ್ ನಿರ್ದೇಶನಾಲಯದ ಸಹಾಯಕ ಮಹಾ ನಿರ್ದೇಶಕ ಕರ್ನಲ್ ಖಾಲಿದ್ ಅಲ್-ಸೈಖನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘‘ನೂತನ ತೆರಿಗೆಯನ್ನು ನಿಭಾಯಿಸಲು ಸೌದಿಯ ನಾಲ್ಕು ವಾಣಿಜ್ಯ ಬ್ಯಾಂಕ್‌ಗಳು ತಾಂತ್ರಿಕವಾಗಿ ಸಿದ್ಧವಾಗಿವೆ ಹಾಗೂ ಇತರ ಬ್ಯಾಂಕ್‌ಗಳು ಇದೇ ಮಾದರಿಯನ್ನು ಅನುಸರಿಸಿ ತಮ್ಮ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿಕೊಳ್ಳಲಿವೆ’’ ಎಂದು ಅವರು ತಿಳಿಸಿದರು.





