ಕೊಪ್ಪ ಜಿಲ್ಲಾ ಪಂಚಾಯತ್ ಉಪಚುನಾವಣೆ: ಜೆಡಿಎಸ್ ಜಯಭೇರಿ
ಕಾಂಗ್ರೆಸ್‌ಗೆ ಮುಖಭಂಗ, ಬಿಜೆಪಿಗೆ ಹೀನಾಯ ಸೋಲು

ಮಂಡ್ಯ/ಮದ್ದೂರು, ಜು.5: ನಗರಸಭೆಯ 28ನೆ ವಾರ್ಡ್ ಮತ್ತು ಮದ್ದೂರು ತಾಲೂಕು ಕೊಪ್ಪ ಜಿಲ್ಲಾ ಪಂಚಾಯತ್ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಭಾರಿಸಿದೆ.
ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಹೀನಾಯ ಸೋಲು ಕಾಣುವ ಮೂಲಕ ಜಲ್ಲೆಯಲ್ಲಿ ಬಿಜೆಪಿಗೆ ನೆಲೆಯಿಲ್ಲವೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಮಂಡ್ಯ ನಗರಸಭೆಯ 28ನೆ ವಾರ್ಡ್‌ಗೆ ಹಾಗೂ ಕೊಪ್ಪ ಜಿಪಂ ಕ್ಷೇತ್ರದ ಚುನಾವಣೆಯಲ್ಲಿ ಕ್ರಮವಾಗಿ ಜೆಡಿಎಸ್ ಅಭ್ಯರ್ಥಿಗಳಾದ ರಾಜು ಮತ್ತು ರೇಣುಕಾ ರಾಮಕೃಷ್ಣ ಗೆಲುವು ಸಾಧಿಸಿದ್ದಾರೆ.
ಬಿ.ಸಿದ್ದರಾಜು ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆಯ 28ನೆ ವಾರ್ಡ್‌ಗೆ ಜೆಡಿಎಸ್‌ನಿಂದ ರಾಜು, ಕಾಂಗ್ರೆಸ್‌ನಿಂದ ದೇವಯ್ಯ ಅಲಿಯಾಸ್ ಪಾಪಣ್ಣ, ಬಿಜೆಪಿಯಿಂದ ಪುಟ್ಟಮ್ಮ ಸ್ಪರ್ಧಿಸಿದ್ದರು.
ಒಟ್ಟು 3,245 ಮತದಾರರ ಪೈಕಿ ಚಲಾವಣೆಯಾಗಿದ್ದ 2,200 ಮತಗಳಲ್ಲಿ ರಾಜು 1,153, ದೇವಯ್ಯ 946, ಪುಟ್ಟಮ್ಮ 302 ಮತಗಳನ್ನು ಪಡೆದರೆ, 22 ಮತದಾರರು ಎಲ್ಲರನ್ನೂ (ನೋಟಾ) ತಿರಸ್ಕರಿಸಿದ್ದಾರೆ.
41 ಸದಸ್ಯಬಲದ ನಗರಸಭೆಯಲ್ಲಿ 15 ಸದಸ್ಯರಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಹಿಡಿದಿದ್ದು, ಈಗ ಅದರ ಬಲ 14ಕ್ಕೆ ಇಳಿದಿದೆ. 9 ಸದಸ್ಯರಿದ್ದ ಜೆಡಿಎಸ್ ಸಂಖ್ಯೆ 11ಕ್ಕೇರಿದೆ. ಬಿ.ಸಿದ್ದರಾಜು ರಾಜೀನಾಮೆಯಿಂದ ಪಕ್ಷೇತರರ ಸಂಖ್ಯೆ 9ಕ್ಕೆ ಇಳಿದಿದ್ದು, ಬಿಜೆಪಿಯ ಓರ್ವ ಸದಸ್ಯರಿದ್ದಾರೆ.
ಮದ್ದೂರು ವರದಿ: ತೀವ್ರ ಕುತೂಹಲ ಮೂಡಿಸಿದ್ದ ತಾಲೂಕಿನ ಕೊಪ್ಪ ಜಿಪಂ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರೇಣುಕಾ ರಾಮಕೃಷ್ಣ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದು, ಜೆಡಿಎಸ್ ಬಂಡಾಯ ಶಾಸಕ ಎನ್.ಚಲುವರಾಯಸ್ವಾಮಿ ಮುಖಭಂಗ ಅನುಭವಿಸಿದ್ದಾರೆ.
12,023 ಮತ ಪಡೆದಿರು ರೇಣುಕಾ ರಾಮಕೃಷ್ಣ 2,684 ಭಾರಿ ಮತಗಳ ಅಂತರದಿಂದ ಗೆಲುವಿನ ನಗೆಬೀರಿದರೆ, ಸಾಧಿಸಿದರೆ, ಪರಾಭವಗೊಂಡಿರುವ ಕಾಂಗ್ರೆಸ್‌ನ ಕಲಾವತಿ ಪ್ರಕಾಶ್ 9,339, ಬಿಜೆಪಿಯ ಪುಟ್ಟಮ್ಮ 302 ಮತ ಪಡೆದಿದ್ದಾರೆ. 87 ನೋಟಾ ಮತಗಳು ಚಲಾವಣೆಯಾಗಿವೆ.
ಈ ಕ್ಷೇತ್ರದಿಂದ ಕಾಂಗ್ರೆಸ್ ಪ್ರತಿನಿಧಿಸಿದ್ದ ಜಾನಕಮ್ಮ ಅನಾರೋಗ್ಯದಿಂದ ನಿಧರಾದ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಎದುರಾಗಿತ್ತು. ಉಪಚುನಾವಣೆಯಲ್ಲಿ ಜೆಡಿಎಸ್ ಕ್ಷೇತ್ರವನ್ನು ಕಿತ್ತುಕೊಂಡಿದೆ.
ಸದರಿ ಕ್ಷೇತ್ರ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟಿರುವುದರಿಂದ ಈ ಚುನಾವಣೆಯನ್ನು ನಾಗಮಂಗಲದ ಜೆಡಿಎಸ್ ಬಂಡಾಯ ಶಾಸಕ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಎಲ್.ಆರ್.ಶಿವರಾಮೇಗೌಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಚಲುವರಾಯಸ್ವಾಮಿ ತೀವ್ರ ಪ್ರಯತ್ನಪಟ್ಟಿದ್ದರೆ, ಸುರೇಶ್‌ಗೌಡ, ಶಿವರಾಮೇಗೌಡ ಸೇರಿದಂತೆ ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಜೆಡಿಎಸ್ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದರು.
ನಗರಸಭೆ ಮತ್ತು ಜಿಪಂ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.







