ಈದ್ಗಾ ಮೈದಾನ ರಸ್ತೆ ನಾಮಕರಣಕ್ಕೆ ಆಗ್ರಹಿಸಿ ಮನವಿ

ಮಂಗಳೂರು, ಜು.5: ಈದ್ಗಾ ಕೇಂದ್ರವಾದ ಬಾವುಟಗುಡ್ಡೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಐತಿಹಾಸಿಕ ಮಹತ್ವವಿರುವ ‘ಈದ್ಗಾ ಮೈದಾನ ರಸ್ತೆ’ ಎಂಬ ಹೆಸರನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ಮುಸ್ಲಿಂ ಒಕ್ಕೂಟದ ನಿಯೋಗವು ಮೇಯರ್ ಕವಿತಾ ಸನಿಲ್, ಪಾಲಿಕೆ ಆಯುಕ್ತ ನಝೀರ್ ಅಹ್ಮದ್, ನಗರ ಕಾಮಗಾರಿ ಸಮಿತಿ ಅಧ್ಯಕ್ಷ ಅಬ್ದುಲ್ ರವೂಫ್, ಪಾಲಿಕೆ ವಿರೋಧ ಪಕ್ಷದ ನಾಯಕ ಗಣೇಶ್ ಹೊಸಬೆಟ್ಟು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ನಗರದ ಕೋಸ್ಮೊಪೊಲಿಟನ್ ಕ್ಲಬ್‌ನಿಂದ ಬಾವುಟಗುಡ್ಡೆಯಿಂದ ಹಾದು ಡಾ.ಬಿ.ಆರ್.ಅಂಬೇಡ್ಕರ್ ವೃತ್ತವರೆಗಿನ ಏಕಮುಖ ರಸ್ತೆಗೆ ನಾಮಕರಣ ಮಾಡುವ ಬಗ್ಗೆ ಪ್ರಸ್ತಾವನೆ ಸೃಷ್ಟಿಯಾಗಿದ್ದು, ಸದ್ರಿ ರಸ್ತೆ ಮತ್ತು ರಸ್ತೆಯ ಆಸುಪಾಸಿನ ಜಮೀನು ಆಸ್ತಿಗಳಿಗೆ ಸಂಬಂಧಪಟ್ಟಂತೆ ಪ್ರಾಮುಖ್ಯತೆ ಇದ್ದು, ಸದ್ರಿ ರಸ್ತೆಯ ನಾಮಕರಣವನ್ನು ಸಮರ್ಪಕವಾಗಿ ಆಗಬೇಕೆಂದು ನಿಯೋಗ ಹಕ್ಕೊತ್ತಾಯ ಮಾಡಿದೆ.
ನಿಯೋಗದ ನೇತೃತ್ವವನ್ನು ಮಾಜಿ ಮೇಯರ್ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ವಹಿಸಿದ್ದರು. ಹ್ಯೂಮನ್ ರೈಟ್ಸ್ ಫೆಡರೇಶನ್‌ನ ಮುಹಮ್ಮದ್ ಹನೀಫ್ ಯು., ಸಿ.ಎಂ.ಮುಸ್ತಫಾ, ಕಾರ್ಪೊರೇಟರ್ ಅಬ್ದುಲ್ ಅಝೀಝ್ ಕುದ್ರೋಳಿ, ವರ್ತಕ ಮೊಯ್ದಿನ್ ಮೋನು, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಅಶ್ರಫ್ ಕಿನಾರ, ಸುಹೈಲ್ ಕಂದಕ್, ಹಮೀದ್ ಕುದ್ರೋಳಿ, ಸಿರಾಜ್ ಬಜ್ಪೆ, ಮನ್ಸೂರ್ ಕುದ್ರೋಳಿ, ಸಾಲಿಹ್ ಬಜ್ಪೆ ಮತ್ತು ನೌಶಾದ್ ಬಂದರ್ ಉಪಸ್ಥಿತರಿದ್ದರು.





