22.5 ಟಿಎಂಸಿ ನೀರು ಹರಿಸಲು ಬಾಕಿ: ತಮಿಳುನಾಡಿನಿಂದ ಸುಪ್ರೀಂಗೆ ಅರ್ಜಿ

ಚೆನ್ನೈ, ಜು. 5: ಸುಪ್ರೀಂ ಕೋರ್ಟ್ 2016ರ ಆದೇಶದ ಪ್ರಕಾರ ಕರ್ನಾಟಕ 22.5 ಟಿಎಂಸಿ ನೀರು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ತಮಿಳುನಾಡು ಸರಕಾರ ಬುಧವಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಇದರಿಂದ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ವಿವಾದ ಇನ್ನಷ್ಟು ಕಾವೇರಿದೆ. ಈ ಸಂಬಂಧ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ತಮಿಳುನಾಡು ಪರ ವಕೀಲರಿಗೆ ತಿಳಿಸಿದೆ. ಅಲ್ಲದೆ ಈ ವಿಷಯದ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಭರವಸೆ ನೀಡಿದೆ.
ಕಳೆದ 25 ದಿನಗಳಲ್ಲಿ 22.5 ಟಿಎಂಸಿ ನೀರು ಹರಿಸುವ ಬಾಧ್ಯತೆ ಕರ್ನಾಟಕಕ್ಕಿತ್ತು. ಆದರೆ, ಇದುವರೆಗೆ 16.58 ಟಿಎಂಸಿ ನೀರು ಹರಿಸಲಾಗಿದೆ ಎಂದು ತಮಿಳು ನಾಡು ಆರೋಪಿಸಿದೆ.
ಕಳೆದ ವರ್ಷ ಅಕ್ಟೋಬರ್ 18ರಂದು ಸುಪ್ರೀಂ ಕೋರ್ಟ್ ಮುಂದಿನ ಆದೇಶದ ವರಗೆ ಪ್ರತಿ ದಿನ 2,000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸುವಂತೆ ಆದೇಶಿತ್ತು. ಹಾಗೂ ಶಾಂತಿ ಹಾಗೂ ಸಾಮರಸ್ಯ ಕಾಪಾಡುವಂತೆ ಎರಡೂ ರಾಜ್ಯಗಳ ಸರಕಾರಗಳಿಗೆ ತಿಳಿಸಿತ್ತು.
ಈ ಹಿಂದೆ 2016 ಸೆಪ್ಟಂಬರ್ 30ರಂದು ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂಬ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ಛೀಮಾರಿ ಹಾಕಿತ್ತು.





