ಮೇಕೆದಾಟುಗೆ ಅನುಮತಿ ನೀಡಬೇಡಿ: ಕೇಂದ್ರಕ್ಕೆ ತಮಿಳುನಾಡು ಸಿಎಂ ಪತ್ರ

ಚೆನ್ನೈ. ಜು. 4: ಕಾವೇರಿ ನದಿಗುಂಟ ಮೇಕೆದಾಟು ಜಲಸಂಗ್ರಹಾಗಾರ ನಿರ್ಮಿಸಲು ಕರ್ನಾಟಕಕ್ಕೆ ಅನುಮತಿ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪಳ್ಳಿ ಪಳನಿಸ್ವಾಮಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಕರ್ನಾಟಕ ಸರಕಾರ ತಾಂತ್ರಿಕ ಅನುಮತಿಗಾಗಿ ಕೇಂದ್ರ ಜಲ ಆಯೋಗವನ್ನು ಸಂಪರ್ಕಿಸಿದೆ ಹಾಗೂ ವಿಸ್ತೃತ ವರದಿ ಸಲ್ಲಿಸಿದೆ ಎಂಬ ಬಗ್ಗೆ ಮಾದ್ಯಮಗಳಲ್ಲಿ ವ್ಯಾಪಕ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪಳನಿಸ್ವಾಮಿ ಕೇಂದ್ರ ಜಲ ಸಂಪನ್ಮೂಲನ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ಸಚಿವೆ ಉಮಾ ಭಾರತಿ ಅವರಿಗೆ ಪತ್ರ ಬರೆದಿದ್ದಾರೆ.
ಎಲ್ಲ ಜಲಾನಯನ ಪ್ರದೇಶದ ರಾಜ್ಯಗಳ ಒಪ್ಪಿಗೆ ಪಡೆಯುವವರೆಗೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೇಕೆದಾಟು ಅಥವಾ ಯಾವುದೇ ಯೋಜನೆಗೆ ಕೇಂದ್ರ ಜಲ ಆಯೋಗದ ಅಧಿಕಾರಿಗಳು ಒಪ್ಪಿಗೆ ನೀಡಬಾರದು ಎಂದು ಸೂಚನೆ ನೀಡುವಂತೆ ಉಮಾ ಭಾರತಿ ಅವರಿಗೆ ಬರೆದ ಪತ್ರದಲ್ಲಿ ಪಳನಿ ಸ್ವಾಮಿ ಹೇಳಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಕಾವೇರಿ ಜಲ ನಿಯಂತ್ರಣ ಮಂಡಳಿ ರೂಪಿಸಲಾಗಿದೆ. ನ್ಯಾಯಾಂಗ ಪ್ರಸ್ತಾವನೆಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದ ಅವರು, ಕಾವೇರಿ ಜಲ ವಿವಾದ ಇತ್ಯರ್ಥವಾಗುವ ವರೆಗೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮೇಕೆದಾಟು ಯೋಜನೆ ಅಥವಾ ಯಾವುದೇ ಯೋಜನೆಗೆ ಅರಣ್ಯ, ಪರಿಸರ, ವನ್ಯಜೀವಿ ಅಥವಾ ಯಾವುದೇ ಶಾಸನಾತ್ಮಕ ಒಪ್ಪಿಗೆಯನ್ನು ಸಂಬಂಧಿತ ಸಚಿವಾಲಯ ನೀಡಬಾರದು ಎಂದು ಅವರು ವಿನಂತಿಸಿದ್ದಾರೆ.







