ಲಾರಿ, ಕಾರು ಢಿಕ್ಕಿ: ನಾಲ್ವರಿಗೆ ಗಂಭೀರ ಗಾಯ
ಪುತ್ತೂರು, ಜು.5 : ಕೆಂಪು ಕಲ್ಲು ಸಾಗಾಟದ ಲಾರಿ ಮತ್ತು ಆಲ್ಟೋ ಕಾರೊಂದರ ನಡುವೆ ಢಿಕ್ಕಿ ಸಂಭವಿಸಿ, ದುಬೈ ಪ್ರಯಾಣಕ್ಕಾಗಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಇಬ್ಬರ ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ಮಾಣಿ ಮೈಸೂರು ರಾಜ್ಯ ರಸ್ತೆಯ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಜಂಜ್ಷನ್ ಬಳಿ ಸಂಭವಿಸಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೊಕ್ಲು ನಿವಾಸಿಗಳಾದ ಖಾಸಿಂ (40), ಹಾರೀಸ್ (28) ಮತ್ತು ಅಶ್ಫಾಕ್ (40) ಮತ್ತು ಕಾರು ಚಾಲಕ ಅರ್ಷದ್ (27) ಗಾಯಗೊಂಡವರು.
ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಮತ್ತು ಪುತ್ತೂರಿನಿಂದ ಪೆರಿಗೇರಿ ಕಡೆಗೆ ತೆರಳುತ್ತಿದ್ದ ಸ್ವರಾಜ್ ಮಜ್ದಾ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಗಂಭೀರ ಗಾಯಗೊಂಡಿರುವ ಈ ನಾಲ್ವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ.
ಖಾಸಿಂ, ಹಾರೀಸ್ ಮತ್ತು ಅಶ್ಫಾಕ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿದು ಬಂದಿದೆ. ಖಾಸಿಂ ಮತ್ತು ಹಾರೀಸ್ ಅವರು ಉದ್ಯೋಗ ನಿಮಿತ್ತ ದುಬೈಗೆ ತೆರಳುವವರಾಗಿದ್ದರು. ಈ ಹಿನ್ನಲೆಯಲ್ಲಿ ಅವರು ಮಡಿಕೇರಿಯಿಂದ ಮಂಗಳೂರು ಕಡೆಗೆ ಆಲ್ಟೋ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.