ರೇರಾ ಕಾಯ್ದೆ ನಿಯಮಾವಳಿಗಳಿಗೆ ಸಂಪುಟ ಸಭೆ ಅಸ್ತು
.jpg)
ಬೆಂಗಳೂರು, ಜು.5: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ರೇರಾ)ಗೆ ಪೂರಕವಾಗಿ ರಾಜ್ಯ ಸರಕಾರವು ರೂಪಿಸಿರುವ ನಿಯಮಾವಳಿಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ತಿಳಿಸಿದರು.
2016ರ ಮಾರ್ಚ್‌ನಲ್ಲಿ ಈ ಕಾಯ್ದೆ ಜಾರಿಗೆ ಬಂದ ಆರು ತಿಂಗಳಲ್ಲಿ ನಿಯಮಗಳನ್ನು ರಚಿಸಬೇಕಿತ್ತು. ಆದರೆ, ಸ್ವಲ್ಪ ತಡವಾಗಿದೆ. ಕೇಂದ್ರ ಸರಕಾರದ ಕಾಯ್ದೆಯನ್ನು ಯಥಾವತ್ತಾಗಿ ರಾಜ್ಯ ಸರಕಾರ ಅನುಷ್ಠಾನಕ್ಕೆ ತರಲಿದೆ. ಪ್ರಗತಿಯಲ್ಲಿರುವ ಯೋಜನೆಗಳಲ್ಲಿ ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದರೆ ಅದನ್ನು ಕಾಯ್ದೆ ವ್ಯಾಪ್ತಿಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಗುಜರಾತ್, ರಾಜಸ್ಥಾನ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಈ ಕಾಯ್ದೆಗೆ ಅನುಗುಣವಾಗಿ ರೂಪಿಸಿರುವ ನಿಯಮಾವಳಿಗಳನ್ನು ಪರಿಶೀಲಿಸಿದ ಬಳಿಕ ನಮ್ಮ ರಾಜ್ಯದಲ್ಲಿಯೂ ಮೂಲ ಕಾಯ್ದೆಗೆ ಧಕ್ಕೆ ಬರದಂತೆ ನಿಯಮಗಳನ್ನು ರೂಪಿಸಿದ್ದೇವೆ ಎಂದು ಜಯಚಂದ್ರ ತಿಳಿಸಿದರು.





